ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆಯಲ್ಲಿರುವ ಪರಿಸರ ವಿರೋಧಿ ಎವಿಟಿ ಚೆಂಡು ಹೂವಿನ ಕಾರ್ಖಾನೆಯನ್ನು ಕೂಡಲೇ ಮುಚ್ಚಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹಾಗೂ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಪೂವಿತಾರವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸುವ ಮೂಲಕ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಿ.ಟಿ.ಕುಮಾರ್ ಮಾತನಾಡಿ, ಕಾರ್ಖಾನೆಯಿಂದ ಹೊರಬರುತ್ತಿರುವ ವಿಷ ಮಿಶ್ರಿತ ರಾಸಾಯನಿಕ ಕಲುಷಿತ ನೀರಿನಿಂದ ಜನ ಜಾನುವಾರುಗಳ ಆರೋಗ್ಯ ಮತ್ತು ಪರಿಸರದ ಮೇಲೆ ಮಾರಣಾಂತಿಕ ಹಾನಿಯಾಗುತ್ತಿದೆ.
ರೈತರು ಯಾವ ಬೆಳೆ ಬೆಳೆಯಲಾಗುತ್ತಿಲ್ಲ. ಅಂತರ್ಜಲ ಕಲುಷಿತವಾಗುತ್ತಿದ್ದು, ರೋಗಗಳಿಂದ ಬಳಲುವಂತಾಗಿದೆ. ಎವಿಟಿ ಕಾರ್ಖಾನೆ ಇರುವ ಬಸವರಾಜಪುರದಲ್ಲಿ ದಲಿತರೇ ವಾಸವಿದ್ದು, ಮಕ್ಕಳು, ವಯೋವೃದ್ಧರು, ಗರ್ಭೀಣಿಯರು, ಜಾನುವಾರುಗಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಕಾರ್ಖಾನೆಯ ವ್ಯವಸ್ಥಾಪಕರು ಗ್ರಾಮಸ್ಥರ ಮೇಲೆಯೇ ದೌರ್ಜನ್ಯ ಎಸಗುತ್ತಾರೆ ಎಂದು ದೂರಿದರು.
ಚುನಾವಣೆ ಬಹಿಷ್ಕಾರ: ಈ ಕಾರ್ಖಾನೆಯು ಸುಮಾರು 10ವರ್ಷಗಳ ಹಿಂದೆಯೇ ಸ್ಥಳೀಯ ಗ್ರಾಪಂ ಹಾಗೂ ತಾಪಂ ಅನುಮತಿ ನೀಡಿದೆ ಎಂದು ಹೇಳಿ ಯಂತ್ರೋಪಕರಣ ಜೋಡಿಸಿ ಇನ್ನೊಂದು ಕಾರ್ಖಾನೆ ಪ್ರಾರಂಭಿಸಿದೆ. ಇದಕ್ಕೆ ಅನುಮತಿ ಪರವಾನಗಿ ಪಡೆದಿರುವುದಿಲ್ಲ. ಜನಪ್ರತಿನಿಧಿಗಳ ಬೆಂಬಲ ಇವರಿಗಿದ್ದು, ಸೂಕ್ತ ಕ್ರಮಕೈಗೊಂಡು ಕಾರ್ಖಾನೆ ಕೂಡಲೇ ಮುಚ್ಚಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲಾ ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಆತಂಕದಲ್ಲಿ ಬದುಕು: ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿಕುಮಾರ್ ಮಾತನಾಡಿ, ಈ ಕಾರ್ಖಾನೆಯು ಅಕ್ರಮವಾಗಿ ಕೆಲಸ ನಿರ್ವಹಿಸುತ್ತಿದ್ದು, ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಕಲುಷಿತ ನೀರಿನಿಂದ ಬೆಳೆ ನಾಶವಾಗುತ್ತಿದ್ದು, ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಈ ವಿಷಯುಕ್ತ ರಾಸಾಯನಿಕ ನೀರು ಕುಡಿವ ನೀರನ್ನು ವಿಷಯುಕ್ತವಾಗಿಸಿದ್ದು, ಜನತೆ ಆತಂಕದಲ್ಲಿ ಬದುಕುವಂತಾಗಿದೆ.
ತೆಂಗಿನ ತೋಟಗಳು ಸೇರಿದಂತೆ ವಿವಿಧ ಮರ ಗಿಡಗಳು ಈ ವಿಷಯುಕ್ತ ನೀರಿನಿಂದ ವಿವಿಧ ರೋಗರುಜಿನಗಳಿಗೆ ಸಿಲುಕಿ ಒಣಗಿ ಸುಳಿ ಬೀಳುವಂತಾಗಿದೆ. ಈ ಬಗ್ಗೆ ಪರಿಸರ ಇಲಾಖೆಗಳಿಗೂ ಸಾಕಷ್ಟು ಬಾರಿ ದೂರು ನೀಡಿದ್ದರೂ ಕಣ್ಮುಚ್ಚಿ ಕುಳಿತಿವೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಹತ್ತಾರು ಗ್ರಾಮಗಳ ಸಾವಿರಾರು ಜನ-ಜಾನುವಾರುಗಳ ಆರೋಗ್ಯ ಮತ್ತು ಪರಿಸರ ಆತಂಕದಲ್ಲಿ ಬದುಕುವಂತಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆದ ಪೂವಿತಾ, ಕಾರ್ಖಾನೆಗೆ ಭೇಟಿ ನೀಡಿ ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸಬೇಡಿ ಎಂದರು.
ಈ ವೇಳೆ ತಹಶೀಲ್ದಾರ್ ಆರತಿ, ಗ್ರಾಪಂ ಸದಸ್ಯ ಈಶ್ವರಪ್ಪ, ಗ್ರಾಮಸ್ಥರಾದ ಮುನಿಯಪ್ಪ, ಗುರುಮೂರ್ತಿ, ನರಸಿಂಹಮೂರ್ತಿ, ಶಂಕರಲಿಂಗಯ್ಯ, ಸಂಘಟನೆ ವಿಜಯಕುಮಾರ್, ಸಿದ್ದೇಶ್, ಮೋಹನ್‌ಬಾಬು, ಕಾಂತರಾಜು, ಮಹಮದ್ ಷಫಿಕ್, ರಾಜೇಶ್ ಮತ್ತಿತರರಿದ್ದರು.