ಶ್ರೀನಿವಾಸಪುರ: ಮೂಲ ಸೌಕರ್ಯ ಕೊರತೆ ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಮೂರು ವರ್ಷಗಳ ಹಿಂದೆ ಪುರಸಭೆಗೆ ಸೇರ್ಪಡೆಗೊಂಡ ಗ್ರಾಮಗಳ ಜನರು ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
ಪುರಸಭೆ ವ್ಯಾಪ್ತಿ ವಿಸ್ತರಿಸಲು ಪಟ್ಟಣಕ್ಕೆ ಹೊಂದಿಕೊಂಡ ಕೊಳ್ಳೂರು, ಉನಿಕಿಲಿ, ಗಡಿಗೆ ಹೊಂದಿಕೊಂಡಿದ್ದ ಬೈರಪಲ್ಲಿ ಹಾಗೂ 3 ಕಿ.ಮೀ. ದೂರದ ಎಚ್.ನಲ್ಲಪಲ್ಲಿ ಗ್ರಾಮಗಳ ಸೇರ್ಪಡೆ ಮಾಡಿಕೊಂಡು ಮೂರು ವರ್ಷ ಕಳೆದಿವೆ. ಸಮರ್ಪಕ ಮೂಲ ಸೌಕರ್ಯ ಒದಗಿಸಿಲ್ಲ. ನಿವೇಶನ, ಆಸ್ತಿ ಖಾತೆ ಮಾಡಿಕೊಟ್ಟಿಲ್ಲ. ಇನ್ನಿತರೆ ಸೌಕರ್ಯಗಳನ್ನು ನೀಡದೆ ಇತ್ತ ಪಂಚಾಯ್ತಿಯಿಂದ ಬೇರ್ಪಟ್ಟು, ಅತ್ತ ಪುರಸಭೆಯಲ್ಲೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗದೇ ತ್ರಿಶಂಕು ಸ್ಥಿತಿಯಲ್ಲಿ ಗ್ರಾಮಗಳನ್ನು ಇಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
Advertisement
ತಾಲೂಕಿನ ಜೆ.ತಿಮ್ಮಸಂದ್ರ ಗ್ರಾಪಂನಿಂದ ಕೊಳ್ಳೂರು ಸೇರಿದಂತೆ ಹಲವು ಗ್ರಾಮಗಳು ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಗೆ ಮೂರು ವರ್ಷಗಳ ಹಿಂದೆ ಸೇರ್ಪಡೆಗೊಂಡಿವೆ. ಈವರೆಗೂ ಮೂಲ ಸೌಕರ್ಯ ಒದಗಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಇದು ನಮಗೆ ಸಂಬಂಧಿಸಿಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿ, ಬೈರಪಲ್ಲಿ ಮತ್ತು ಕೊಳ್ಳೂರು ಗ್ರಾಮಸ್ಥರು ಮತ ಬಹಿಷ್ಕರಿಸಿ, ಅದರ ಪೋಸ್ಟರ್ ಕೂಡ ಬಿಡುಗಡೆ ಮಾಡಿದರು.