Advertisement

Election Update: 300 ಕೋಟಿ ದಾಟಿದ “ಕಾಂಚಾಣ”

09:45 PM Apr 29, 2023 | Team Udayavani |

ಬೆಂಗಳೂರು: ಮತದಾರರಿಗೆ ಆಮಿಷ ಒಡ್ಡುವ ಚುನಾವಣಾ ಅಕ್ರಮದಲ್ಲಿ ಕರ್ನಾಟಕ ದಾಖಲೆ ಬರೆದಿದ್ದು, ಶನಿವಾರ ಚುನಾವಣಾ ಅಕ್ರಮ ಜಪ್ತಿ 300 ಕೋಟಿ ರೂ. ದಾಟಿದೆ. ಇದೇ ವೇಳೆ ಚುನಾವಣಾ ಅಕ್ರಮದಲ್ಲಿ ಬೆಂಗಳೂರು ನಗರ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳು ಪಾರಮ್ಯ ಮೆರೆದಿವೆ.

Advertisement

ವಿಶೇಷವೆಂದರೆ ಕಳೆದ ನಾಲ್ಕು ಚುನಾವಣೆಗಳ ಒಟ್ಟಾರೆ ಅಕ್ರಮ ಜಪ್ತಿಯನ್ನು ಮೀರಿಸುವ ಹಾದಿಯಲ್ಲಿ ಈ ಬಾರಿಯ ಚುನಾವಣೆಯ ಈವರೆಗಿನ ಜಪ್ತಿ ಇದೆ.
ಕರ್ನಾಟಕದಲ್ಲಿನ “ಹಣ ಬಲ’ ನಮಗೆ ದೊಡ್ಡ ಸವಾಲು ಎಂದು ಆರಂಭದಲ್ಲೇ ಕೇಂದ್ರ ಚುನಾವಣಾ ಆಯೋಗ ಆತಂಕ ಹೊರ ಹಾಕಿತ್ತು. ಅದರ “ದಿಗªರ್ಶನ’ ಈಗ ಆಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯ ಆರಂಭದಿಂದ ಕೊನೆವರೆಗೆ ಒಟ್ಟು ಚುನಾವಣಾ ಅಕ್ರಮ ಜಪ್ತಿ 185.74 ಕೋಟಿ ರೂ. ಆಗಿತ್ತು. ಈಗ ಮತದಾನಕ್ಕೆ ಇನ್ನೂ 12 ದಿನ ಬಾಕಿ ಇರುವಾಗಲೇ ಜಪ್ತಿ 302 ಕೋಟಿ ರೂ. ಆಗಿದೆ. ಪ್ರತಿ ದಿನದ ಸರಾಸರಿ ಜಪ್ತಿ 10 ರಿಂದ 12 ಕೋಟಿ ರೂ. ಇದೆ.

ಚುನಾವಣೆ ಘೋಷಣೆಯಾದ ಮಾ.29ರಿಂದ ಏಪ್ರಿಲ್‌ 29ರವರೆಗೆ ಒಂದು ತಿಂಗಳಲ್ಲಿ ಪೊಲೀಸರು, ಅಬಕಾರಿ ಅಧಿಕಾರಿಗಳು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ ಚುನಾವಣಾ ಅಕ್ರಮ ಬರೋಬ್ಬರಿ 302 ಕೋಟಿ ರೂ. ಕಳೆದ ಬಾರಿಯ ಇದೇ ಅವಧಿಯ ಜಪ್ತಿ 120 ಕೋಟಿಗೂ ಹೆಚ್ಚಿತ್ತು. ಆದರೆ, ಈ ಬಾರಿ ದುಪ್ಪಟ್ಟು ಆಗಿದೆ.
ಈವರೆಗೆ ನಗದು, ಮದ್ಯ, ಮಾದಕ ಪದಾರ್ಥ, ಉಚಿತ ಉಡುಗೊರೆ ಸೇರಿ ಪೊಲೀಸರು 196.72 ಕೋಟಿ, ಅಬಕಾರಿ ಇಲಾಖೆ 71.66 ಕೋಟಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 34.38 ಕೋಟಿ ರೂ. ಸೇರಿ ಒಟ್ಟು 302.78 ಕೋಟಿ ರೂ. ಜಪ್ತಿ ಮಾಡಿವೆ. ಈ ಚುನಾವಣಾ ಅಕ್ರಮ ಜಪ್ತಿಯಲ್ಲಿ ಇಡೀ ರಾಜ್ಯದಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಈವರೆಗಿನ ಜಪ್ತಿ 81.76 ಕೋಟಿ ರೂ. ಆಗಿದ್ದು, ಇದು ರಾಜ್ಯದ ಒಟ್ಟಾರೆ ಜಪ್ತಿಯ ಶೇ.28ರಿಂದ 30ರಷ್ಟಿದೆ. ಉಳಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 33.87 ಕೋಟಿ ರೂ., ಶಿವಮೊಗ್ಗ ಜಿಲ್ಲೆಯಲ್ಲಿ 30 ಕೋಟಿ, ಬೆಳಗಾವಿ ಜಿಲ್ಲೆಯಲ್ಲಿ 21.97 ಕೋಟಿ, ಧಾರವಾಡ ಜಿಲ್ಲೆ 12.24 ಕೋಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 10.18 ಕೋಟಿ ರೂ.ಗಳಂತೆ ಹೆಚ್ಚಿನ ಜಪ್ತಿ ಮಾಡಲಾಗಿದೆ.

ಕಳೆದ ನಾಲ್ಕು ಚುನಾವಣೆಗಳಿಗೆ ಮೀರಿದ ಜಪ್ತಿ:
ಈ ಬಾರಿಯ ಚುನಾವಣಾ ಅಕ್ರಮ ಜಪ್ತಿ ಕಳೆದೆರಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಜಪ್ತಿಯನ್ನು ಮೀರಿಸುವ ಹಾದಿಯಲ್ಲಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ 14.42 ಕೋಟಿ, 2014 ಲೋಕಸಭೆ ಚುನಾವಣೆಯಲ್ಲಿ 28.08 ಕೋಟಿ, 2018ರ ವಿಧಾನಸಭೆ ಚುನಾವಣೆಯಲ್ಲಿ 185.74 ಕೋಟಿ, 2019 ಲೋಕಸಭೆ ಚುನಾವಣೆಯಲ್ಲಿ 88.27 ಕೋಟಿ ರೂ. ಸೇರಿ ಒಟ್ಟಾರೆ 316 ಕೋಟಿ ರೂ. ಅಕ್ರಮ ಜಪ್ತಿ ಆಗಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಈವರೆಗೆ 302.78 ಕೋಟಿ ರೂ. ದಾಟಿದ್ದು, ಇದು ಕಳೆದ ನಾಲ್ಕು ಚುನಾವಣೆಗಳ ಒಟ್ಟಾರೆ ಜಪ್ತಿಯನ್ನು ಮೀರಿಸುವ ಹಾದಿಯಲ್ಲಿದೆ.

ಅತಿ ಹೆಚ್ಚು ಜಪ್ತಿ
– ಬೆಂಗಳೂರು ನಗರ ಜಿಲ್ಲೆ: 81.76 ಕೋಟಿ ರೂ.
– ಚಿಕ್ಕಮಗಳೂರು: 33.87
-ಶಿವಮೊಗ್ಗ: 30.82
– ಬೆಳಗಾವಿ: 21.97 ಕೋಟಿ
– ಧಾರವಾಡ-12.24 ಕೋಟಿ
– ಬೆಂಗಳೂರು ಗ್ರಾ-10.18 ಕೋಟಿ
ಅತಿ ಕಡಿಮೆ ಜಪ್ತಿ
– ಕೊಡಗು-75.73 ಲಕ್ಷ
– ಯಾದಗಿರಿ: 1.41 ಕೋಟಿ
– ಬಳ್ಳಾರಿ-1.68 ಕೋಟಿ
– ಉಡುಪಿ: 1.98 ಕೋಟಿ

Advertisement

ಚುನಾವಣೆ ಅಕ್ರಮ ಜಪ್ತಿ
2013ರ ವಿಧಾನಸಭೆ 14.42 ಕೋಟಿ
2014 ಲೋಕಸಭೆ 28.08 ಕೋಟಿ
2018ರ ವಿಧಾನಸಭೆ 185.74 ಕೋಟಿ
2019 ಲೋಕಸಭೆ 88.27 ಕೋಟಿ
2023 ವಿಧಾನಸಭೆ (ಏ.29ರವರೆಗೆ) 302.78 ಕೋಟಿ

~ ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next