Advertisement

Election Update: ಹಾಸನದಲ್ಲಿ JDS ಶಕ್ತಿ ಪ್ರದರ್ಶನ

11:28 PM Apr 20, 2023 | Team Udayavani |

ಹಾಸನ: ಎಚ್‌.ಡಿ.ರೇವಣ್ಣ ಕುಟುಂಬದವರು ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಪಿ.ಸ್ವರೂಪ್‌ ಬೆಂಬಲಕ್ಕೆ ನಿಂತ ಬೆನ್ನಲ್ಲೇ ನಗರದಲ್ಲಿ ಗುರುವಾರ ನಡೆದ ಜೆಡಿಎಸ್‌ನ ಬೃಹತ್‌ ರ್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ದಳಪತಿಗಳ ವಿಶ್ವಾಸವನ್ನು ಇಮ್ಮಡಿಗೊಳಿಸಿತು.

Advertisement

ಕಳೆದ ಶುಕ್ರವಾರ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ನಡೆಸಿದ್ದ ರ್ಯಾಲಿಗೆ ಎದಿರೇಟು ನೀಡಲೆಂದೇ ಜೆಡಿಎಸ್‌ ಗುರುವಾರ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಡಾ| ಸೂರಜ್‌ ರೇವಣ್ಣ, ಭವಾನಿ ರೇವಣ್ಣ ಸಹಿತ ಜೆಡಿಎಸ್‌ ಪ್ರಮುಖರು ರ್ಯಾಲಿಯಲ್ಲಿ ಪಾಲ್ಗೊಂಡರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಶಾಸಕ ಪ್ರೀತಂ ಗೌಡ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಅವರನ್ನು ಸೋಲಿಸಿ ಸ್ವರೂಪ್‌ ಅವರನ್ನು ಗೆಲ್ಲಿಸುವ ಸವಾಲನ್ನು ನಮ್ಮ ಕುಟುಂಬ ತೆಗೆದುಕೊಂಡಿದೆ ಎಂದು ಹೇಳಿದರು. ಪ್ರೀತಂ ಗೌಡ ಏನೇನು ಮಾಡಿದ್ದಾರೆಂದು ಈಗ ಹೇಳುವುದಿಲ್ಲ. ಇನ್ನೊಂದು ದಿನ ಹಾಸನ ನಗರಕ್ಕೆ ಬಂದು ಎಲ್ಲವನ್ನೂ ಹೇಳುವೆ. ಹಾಸನದ ಅಭಿವೃದ್ಧಿ ಆಗಬೇಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಸೋಲಿಸಲೇಬೇಕು. ಸ್ವರೂಪ್‌ ಅವರನ್ನು ಗೆಲ್ಲಿಸಿ ಹಾಸನಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಭವಾನಿಗೆ ಕೃತಜ್ಞತೆ ಸಲ್ಲಿಸಿದ ಎಚ್‌ಡಿಕೆ
ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ವಿವಾದದಿಂದ ದೇವೇಗೌಡರ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತಿದೆ ಎಂಬ ಅಪಪ್ರಚಾರ ಆರಂಭವಾದಾಗ ಭವಾನಿ ರೇವಣ್ಣ ಅವರು ಸ್ವರೂಪ್‌ಗೆ ಜೆಡಿಎಸ್‌ ಟಿಕೆಟ್‌ ನೀಡಲು ಸಹಕಾರ ನೀಡಿದರು. ಸ್ವರೂಪ್‌ ನನ್ನ ಮಗನಿದ್ದಂತೆ ಎಂದು ನಿಷ್ಕಲ್ಮಶ ಮನಸ್ಸಿನಿಂದ ಆಶೀರ್ವಾದ ಮಾಡಿ ವಿವಾದಗಳಿಗೆ ತೆರೆ ಎಳೆದರು ಎಂದು ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಭವಾನಿ ರೇವಣ್ಣ ಅವರ ಸಮ್ಮುಖದಲ್ಲೇ ಕುಮಾರಸ್ವಾಮಿ ಕೃತಜ್ಞತೆಯ ಮಾತುಗಳನ್ನಾಡಿದ್ದಲ್ಲದೆ, ಶಾಸಕ ಪ್ರೀತಂಗೌಡ ಅವರು ರೇವಣ್ಣ ಮತ್ತು ಕುಟುಂಬದವರ ವಿರುದ್ಧ ಮಾಡಿದ್ದ ಅವಹೇಳನಕ್ಕೆ ತಕ್ಕಪಾಠ ಕಲಿಸಲು ಭವಾನಿ ಅವರೂ ಸ್ವರೂಪ್‌ ಗೆಲ್ಲಿಸುವ ಪಣ ತೊಟ್ಟಿದ್ದಾರೆಂದೂ ಹಾಡಿ ಹೊಗಳಿದರು.

ದೇವೇಗೌಡರಿಗೆ ಉಡುಗೊರೆ ನೀಡೋಣ
ಹಾಸನ: ಚುನಾವಣೆಯ ಫ‌ಲಿತಾಂಶ ಮೇ 13ರಂದು ಘೋಷಣೆಯಾಗುತ್ತದೆ. ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲ್ಲಿಸಿ, ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಮೇ 18ರಂದು ದೇವೇಗೌಡರ ಹುಟ್ಟು ಹಬ್ಬದ ಉಡುಗೊರೆ ನೀಡೋಣ ಎಂದು ಭವಾನಿ ರೇವಣ್ಣ ಹೇಳಿದರು. ಹಾಸನದ ಜೆಡಿಎಸ್‌ ಟಿಕೆಟ್‌ಗೆ ಪೈಪೋಟಿ ಆರಂಭವಾದಾಗ ದೇವೇಗೌಡರ ಅಣತಿಯಂತೆ ಎಚ್‌.ಡಿ.ಕುಮಾರಸ್ವಾಮಿ ಅವರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡಿದ್ದೇನೆ. ದೊಡ್ಡಮನೆಯ ಕುಟುಂಬಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next