ಬೆಂಗಳೂರು: ಆರಂಭದಿಂದಲೂ ಎರಡು ಕ್ಷೇತ್ರಗಳ ಬಡಬಡಿಕೆಯಲ್ಲಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಉತ್ಸಾಹಕ್ಕೆ ಕಾಂಗ್ರೆಸ್‌ನ ಮೂರನೇ ಪಟ್ಟಿ ತಣ್ಣೀರೆರಚಿದೆ. ಈ ಮೂಲಕ ಅವರ ಸ್ಪರ್ಧೆಯನ್ನು ಒಂದೇ ಕ್ಷೇತ್ರಕ್ಕೆ ಸೀಮಿತಗೊಳಿಸುವಲ್ಲಿ ಅವರದ್ದೇ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ.
ಕಳೆದ ಬಾರಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಈ ಬಾರಿಯೂ ಎರಡು ಕಡೆಯಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಆ ಎರಡನೇ ಕ್ಷೇತ್ರ ಕೋಲಾರ ಆಗಿರಲಿದೆ ಎಂದೂ ಚುನಾವಣಾ ಕಾವು ಏರುವ ಮೊದಲೇ ಘೋಷಿಸಿದ್ದರು. ಈ ಮಧ್ಯೆ ಮೊದಲೆರಡು ಪಟ್ಟಿಯಲ್ಲಿ ಕೋಲಾರ ಪ್ರಸ್ತಾಪವೂ ಇರಲಿಲ್ಲ. ಇದರಿಂದ ಎಲ್ಲರ ಚಿತ್ತ “ಚಿನ್ನದ ನಾಡಿ’ನತ್ತ ನೆಟ್ಟಿತ್ತು. ಆದರೆ, ಕೋಲಾರಕ್ಕೆ ಕೊತ್ತೂರು ಮಂಜುನಾಥ ಹೆಸರು ಘೋಷಣೆಯಾಗುವ ಮೂಲಕ ನಿರೀಕ್ಷೆ ಹುಸಿಯಾಗಿದೆ. ಜತೆಗೆ ವರುಣಾದಿಂದ ಗೆಲ್ಲಲೇಬೇಕಾದ ಅನಿವಾರ್ಯತೆಯೂ ಅವರಿಗೆ ಸೃಷ್ಟಿಯಾಗಿದೆ.
2018ರಲ್ಲಿ ಎರಡು ಕಡೆ ಕಣಕ್ಕಿಳಿಯುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಒಂದು ಕಡೆ (ತವರು ಜಿಲ್ಲೆ) ಸೋಲನುಭವಿಸಿ, ಮತ್ತೂಂದು ಕಡೆ ಗೆದ್ದಿದ್ದರು. ಈಗ ಅವರು ಪ್ರತಿಪಕ್ಷದ ನಾಯಕರಾಗಿದ್ದು, ಎರಡೆರಡು ಕಡೆ ಸ್ಪರ್ಧಿಸುವುದರೊಂದಿಗೆ ಗೆಲ್ಲಬೇಕಾಗುತ್ತದೆ. ಅಕಸ್ಮಾತ್ ಒಂದು ಕಡೆ ಸೋತರೂ ತಪ್ಪು ಸಂದೇಶ ರವಾನೆ ಆಗುತ್ತದೆ. ಹಾಗಾಗಿ, ಒಂದೇ ಕ್ಷೇತ್ರದಿಂದ ಕಣಕ್ಕಿಳಿಯುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ಒಳಗೆ ವ್ಯಕ್ತವಾಗಿತ್ತು. ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲುವು ಅಷ್ಟೊಂದು ಸುಲಭವಲ್ಲ ಎಂಬುದಕ್ಕೆ ಕೋಲಾರ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಬಣ ರಾಜಕಾರಣವೇ ಪ್ರಮುಖವಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡ ಸಿದ್ದರಾಮಯ್ಯ ವಿರೋಧಿ ಬಣ ಕೊನೆಗೂ ಕೋಲಾರ ತಪ್ಪಿಸಿ ವರುಣಾಗೆ ಸೀಮಿತಗೊಳಿಸಿದ್ದಾರೆ.
ಕೋಲಾರ ಗುಟ್ಟನ್ನು ವರಿಷ್ಠರಿಗೆ ಮನದಟ್ಟು ಮಾಡಿ, ಹೈಕಮಾಂಡ್‌ನಿಂದಲೇ ಸಿದ್ದರಾಮಯ್ಯ ಅವರನ್ನು ಮನವೊಲಿಸುವಲ್ಲಿ “ಕೈ’ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ಕಣಕ್ಕಿಳಿಯಲಿರುವ ಕ್ಷೇತ್ರ ವರುಣಾ ಒಂದೇ ಎನ್ನುವುದು ಖಚಿತವಾಗಿದೆ. ಈಗ ಅವರ ಮುಂದೆ ಎರಡು ಸವಾಲುಗಳಿವೆ- ಒಂದು ಪಕ್ಷದಲ್ಲೇ ತಮ್ಮನ್ನು ಕಟ್ಟಿಹಾಕಲು ಹವಣಿಸುತ್ತಿರುವ ಬಣದ ಬೇಗುದಿಯನ್ನು ಮೆಟ್ಟಿನಿಲ್ಲುವುದು. ಮತ್ತೂಂದು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಎದುರಾಳಿಗಳನ್ನು ಮಣಿಸುವುದು. ಇದರ ಜತೆಗೆ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಗೆಲುವಿನ ದಡ ತಲುಪಿಸುವುದು. ಇದೆಲ್ಲವೂ ಅಷ್ಟು ಸುಲಭದ ತುತ್ತು ಅಲ್ಲ. ಇದಕ್ಕಾಗಿ ಅವರು ಹಲವು ಪಟ್ಟುಗಳು, ಕಸರತ್ತುಗಳನ್ನು ಕೂಡ ನಡೆಸಬೇಕಾಗಿದೆ. ಅಂದಹಾಗೆ, ಬಿಜೆಪಿಯಿಂದ ಸಿದ್ದರಾಮಯ್ಯ ಅವರ ಎದುರಾಳಿ ವಿ. ಸೋಮಣ್ಣ ಆಗಿದ್ದರೆ, ಜೆಡಿಎಸ್‌ನಿಂದ ಭಾರತಿ ಶಂಕರ್ ಆಗಿದ್ದಾರೆ.