Advertisement

16ಕ್ಕೆ ಧಾರವಾಡ ತಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

09:06 AM Jun 07, 2020 | Suhan S |

ಧಾರವಾಡ: ಸ್ಥಳೀಯ ತಾಪಂ ಅಧ್ಯಕ್ಷ ಸ್ಥಾನಕ್ಕೆ ಜೂ. 16ರಂದು ಬೆಳಗ್ಗೆ 10 ಗಂಟೆಗೆ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲು ಮುಹೂರ್ತ ನಿಗದಿ ಮಾಡಲಾಗಿದೆ.

Advertisement

2018 ಡಿ. 20ರಂದು ಅಧ್ಯಕ್ಷ ಸ್ಥಾನಕ್ಕೆ ಏರಿದ್ದ ಹಾರೋಬೆಳವಡಿ ತಾಪಂ ಕ್ಷೇತ್ರದ ಸದಸ್ಯ ಈರಪ್ಪ ಶಂಕ್ರಪ್ಪ ಏಣಗಿ ಅವರು, 14 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದಂತೆ ಉಳಿದ ಕೊನೆಯ 14 ತಿಂಗಳ ಅವಧಿಯಲ್ಲಿ ಮತ್ತೂಬ್ಬರಿಗೆ ಅವಕಾಶ ಒದಗಿಸಲು ಮಾ. 18ರಂದೇ ಡಿಸಿ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು. ಈ ರಾಜೀನಾಮೆ ಏ. 2ರಂದು ಅಂಗೀಕಾರವಾಗಿತ್ತು. ಅಧ್ಯಕ್ಷರ ರಾಜೀನಾಮೆ ಅಂಗೀಕಾರವಾಗಿ 2 ತಿಂಗಳು ಮೇಲಾದರೂ ಕೋವಿಡ್ ಲಾಕ್‌ಡೌನ್‌ದಿಂದಾಗಿ ಚುನಾವಣೆ ವಿಳಂಬವಾಗಿತ್ತು.

ಇದೀಗ ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆ ಜೂ. 16ರಂದು ನಿಗದಿಯಾಗುತ್ತಿದ್ದಂತೆಯೇ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೆ ರಾಜಕೀಯ ಚಟುವಟಿಕೆಗಳು ತೆರೆಮರೆಯಲ್ಲಿ ಸಾಗಿದೆ. ಒಟ್ಟು 24 ಸದಸ್ಯ ಬಲದ ತಾಪಂನಲ್ಲಿ ಕಾಂಗ್ರೆಸ್‌ ಪಕ್ಷದ 11, ಬಿಜೆಪಿಯ 8, ಜೆಡಿಎಸ್‌ ಪಕ್ಷದ 1 ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಇದ್ದಾರೆ. ಕಾಂಗ್ರೆಸ್‌ ಪಕ್ಷದವರಾದ ಹೆಬ್ಬಳ್ಳಿ ಕ್ಷೇತ್ರದ ಮಲ್ಲಪ್ಪ ಭಾವಿಕಟ್ಟಿ ಹಾಗೂ ಈರಣ್ಣ ಏಣಗಿ ಕೆಲ ಅವಧಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿ, ರಾಜೀನಾಮೆ ನೀಡಿದ್ದಾರೆ.

ಸದ್ಯ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ ಪಕ್ಷದಿಂದ ನಾಲ್ಕೈದು ಜನರ ಆಕಾಂಕ್ಷಿ ಪಟ್ಟಿ ಇದೆ. ಸಾಮಾನ್ಯ ವರ್ಗಕ್ಕೆ ಮೀಸಲು ಇರುವ ಈ ಸ್ಥಾನಕ್ಕೆ ಎಲ್ಲರಿಗೂ ಅವಕಾಶ ಇದ್ದು, ಆದರೆ ಸಾಮಾನ್ಯ ವರ್ಗಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಹೀಗಾಗಿ ಸಹಜವಾಗಿ ಮಾದನಬಾವಿ ಕ್ಷೇತ್ರದ ಸದಸ್ಯ ರವಿವರ್ಮ ಪಾಟೀಲ, ಕನಕೂರ ಕ್ಷೇತ್ರದ ಬಸವರಾಜ ಮಾಳಪಾರ ಹಾಗೂ ಅಮ್ಮಿನಬಾವಿಕ್ಷೇತ್ರದ ಸುರೇಂದ್ರ ಸೇರಿದಂತೆ ಇನ್ನೂ 2-3 ಜನರ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಎಲ್ಲರೂ ಅಧ್ಯಕ್ಷ ಗಾದಿಗಾಗಿ ತೆರೆಮರೆಯ ಕಸರತ್ತು ಆರಂಭಿಸಿದ್ದು, ಕೊನೆಯ ಕ್ಷಣದಲ್ಲಿ ಯಾರಿಗೆ ಅಧಿಕಾರ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ

Advertisement

Udayavani is now on Telegram. Click here to join our channel and stay updated with the latest news.

Next