ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2019-24ನೇ ಸಾಲಿನ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮೇ 27ರಿಂದ ಆಗಸ್ಟ್ 7ರವರೆಗೆ 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಈ ಸಂಬಂಧ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಸಹಕಾರ ಸಂಘಗಳ ಉಪ ನಿಬಂಧಕ ಅಶ್ವತ್ಥ ನಾರಾಯಣ ಅವರು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಅದರಂತೆ ಜಿಲ್ಲೆ, ತಾಲೂಕು ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗಳಿಗೆ ಮೇ 27ರಿಂದ ಜೂನ್ 13ರವರೆಗೆ, ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ಜೂ.17ರಿಂದ 27ರವರೆಗೆ ನಡೆಯಲಿವೆ.
ಜಿಲ್ಲಾ ಶಾಖೆ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ಜುಲೈ 1ರಿಂದ 11ರವರೆಗೆ ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಇಲಾಖಾವಾರು ಚುನಾವಣೆ ಮೇ 27ರಿಂದ ಜೂ.26ರವರೆಗೆ ನಡೆಯಲಿದೆ. ಅಂತಿಮವಾಗಿ ಕೇಂದ್ರ ಸಂಘದ ಅಧ್ಯಕ್ಷರು, ಖಜಾಂಚಿ ಸ್ಥಾನದ ಚುನಾವಣೆಗಳು ಜು.17ರಿಂದ ಆಗಸ್ಟ್ 7ರವರೆಗೆ ನಡೆಯಲಿದೆ.
ಕೇಂದ್ರ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಫೆ.28ರವರೆಗೆ ಸದಸ್ಯತ್ವ ನೋಂದಾಯಿಸಿರುವ ಎಲ್ಲ ಸರ್ಕಾರಿ ನೌಕರರು ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಶಾಖಾ ಸಂಘಗಳ ಚುನಾವಣಾ ವೇಳಾಪಟ್ಟಿಯನ್ನು ಆಯಾ ಶಾಖೆಗಳ ಚುನಾವಣಾಧಿಕಾರಿಗಳೇ ಪ್ರಕಟಿಸಲಿದ್ದಾರೆ.