Advertisement

ವ್ಯಾಪಾರ ಸಮಿತಿಗೆ ಚುನಾವಣೆ

05:28 PM Dec 09, 2019 | Suhan S |

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಪಟ್ಟಣ ವ್ಯಾಪಾರ ಸಮಿತಿಗೆ ಸದಸ್ಯರ ಆಯ್ಕೆ ಮಾಡುವ ಸಲುವಾಗಿ (ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿ) ಚುನಾವಣೆಯನ್ನು ಡಿ.21ರಂದು ನಡೆಸಲು ಸಹಕಾರಿ ಚುನಾವಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

Advertisement

ಪಟ್ಟಣ ವ್ಯಾಪಾರಿ ಸಮಿತಿಗೆ ತಲಾ 10 ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಅದರಲ್ಲಿ 1/3ರಷ್ಟು ಮಹಿಳಾ ಸದಸ್ಯರು, ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗ, ಅಂಗವಿಕಲರು, ಅಲ್ಪಸಂಖ್ಯಾತರಲ್ಲಿ ಕನಿಷ್ಠ ಒಬ್ಬ ಸದಸ್ಯರ ಇರಬೇಕು ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.

ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಡಿ. 9ರಿಂದ 13ರವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಡಿ.15 ಕೊನೆಯ ದಿನವಾಗಿದ್ದು, ಡಿ.21ರ ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆವರೆಗೆ ಹುಳಿಯಾರು ಪಪಂ ಕಚೇರಿ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದೇ ದಿನ (ಡಿ.21) ಫಲಿತಾಂಶ ಪ್ರಕಟವಾಗಲಿದೆ.

ಪಪಂನ ಮೊದಲ ಸಮಿತಿ: ಹುಳಿಯಾರು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 2 ವರ್ಷದ ಬಳಿಕ ಬೀದಿ ಬದಿ ವ್ಯಾಪಾರಸ್ಥರ ಸಮಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಹಾಗಾಗಿ ಬೀದಿ ಬದಿ ವ್ಯಾಪಾರಿಗಳಲ್ಲಿ ಸಹಜವಾಗಿ ಕುತೂಹಲ ಮೂಡಿದೆ.

92 ವ್ಯಾಪಾರಿಗಳು: ಹುಳಿಯಾರು ಪಟ್ಟಣ  ದಲ್ಲಿ 92 ಮಂದಿಯನ್ನು ಬೀದಿ ಬದಿ ವ್ಯಾಪಾರಿಗಳನ್ನಾಗಿ ಗುರುತಿಸಿದ್ದು ಇವರೆಲ್ಲರಿಗೂ ಗುರುತಿನ ಚೀಟಿ ವಿತರಿಸಲಾಗಿದೆ. ಈ ಗುರುತಿನ ಚೀಟಿ ಉಳ್ಳವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಪಪಂ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣದಡಿ ಬೀದಿ ವ್ಯಾಪಾರಿಗಳ ಗುರುತಿಸಿ ಗುರುತಿನ ಚೀಟಿ ನೀಡಲಾಗಿದೆ. ಈ ಗುರುತಿನ ಚೀಟಿ ಹೊಂದಿರುವ ಬೀದಿ ವ್ಯಾಪಾರಿಗಳಿಗಷ್ಟೇ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರ ಆಯ್ಕೆಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹುಳಿಯಾರು ಪಟ್ಟಣ ಪಂಚಾಯಿತಿ ಸಂಪರ್ಕಿಸಬಹುದು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್‌ ತಿಳಿಸಿದ್ದಾರೆ.

ಐದು ವರ್ಷಗಳ ಅಧಿಕಾರಾವಧಿ: ಬೀದಿಬದಿ ವ್ಯಾಪಾರಸ್ಥರ ಸಮಿತಿಗೆ ಆಯ್ಕೆಯಾಗುವ ಸದಸ್ಯರ ಅಧಿಕಾರಾವಧಿ 5 ವರ್ಷ ಇರುತ್ತದೆ. ಬೀದಿಬದಿ ವ್ಯಾಪಾರಸ್ಥರ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಮಿತಿ ಇದಾಗಿದ್ದು, ಇದರಲ್ಲಿ ವಿವಿಧ ಇಲಾಖಾಧಿಕಾರಿಗಳೂ ಇರುತ್ತಾರೆ.

ಬೀದಿಬದಿ ವ್ಯಾಪಾರಿಗಳಿವರು: ಹುಳಿಯಾರು ಖಾಸಗಿ ಬಸ್‌ನಿಲ್ದಾಣ, ರಾಜಕುಮಾರ್‌ ರಸ್ತೆ, ರಾಮಗೋಪಾಲ್‌ ಸರ್ಕಲ್‌ ಸೇರಿ ಪಟ್ಟಣದ ವಿವಿಧ ವಾಡ್‌ ಗಳಲ್ಲಿ ತಳ್ಳುವ ಗಾಡಿ, ತಾತ್ಕಾಲಿಕ ಗೂಡು, ಶೆಡ್‌, ಮರದ ನೆರಳುಗಳಲ್ಲಿ ಹಣ್ಣು, ಹೂವು, ತರಕಾರಿ, ಲಘು ತಿನಿಸು ವ್ಯಾಪಾರ ಮಾಡುತ್ತಿರುವವರು.

ಇಂದಿನಿಂದ ನಾಮಪತ್ರ ಸಲ್ಲಿಕೆ: ಪಟ್ಟಣ ವ್ಯಾಪಾರ ಸಮಿತಿ ಚುನಾವಣೆ ನಾಮಪತ್ರವನ್ನು ಡಿ. 9ರ ಸೋಮವಾರ ದಿಂದ ಡಿ.13ರ ಶುಕ್ರವಾರದವರೆಗೆ ಬೆಳಗ್ಗೆ 11ರಿಂದ 3ರ ವರೆಗೆ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸುವವರು ಜಾತಿ ಪ್ರಮಾಣ ಪತ್ರ, ಭಾವಚಿತ್ರ ಹಾಗೂ 2 ಸಾವಿರ ರೂ. ಠೇವಣಿ ಕೊಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next