ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲವೆ? ಬೇರೆ ಪಕ್ಷದವರನ್ನು ಕರೆತಂದು ಅಭ್ಯರ್ಥಿ ಮಾಡುವ ಅವಶ್ಯಕತೆ ಏನಿದೆ? ಇದನ್ನೆಲ್ಲ ನೋಡಿಕೊಂಡು ಸುಮ್ಮನಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಮಾನ – ಮರ್ಯಾದೆ ಇಲ್ಲವೇ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಹರಿಹಾಯ್ದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಒಂದು ಕಾಲದಲ್ಲಿ ಶ್ರೀನಿವಾಸಪ್ರಸಾದ್ ಗೆದ್ದಿದ್ದು ಕಾಂಗ್ರೆಸ್‌ನಿಂದಲೇ, ಹೀಗಾಗಿ ನಂಜನಗೂಡಿನಲ್ಲಿ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿ ಯಾದರೂ ಗೆಲ್ಲುತ್ತಾರೆ. ಬೇರೆ ಪಕ್ಷದವರನ್ನು ಕರೆತಂದು ಅಭ್ಯರ್ಥಿ ಮಾಡುವ ಅವಶ್ಯಕತೆ ಇಲ್ಲ.
ಮತ್ತೂಂದೆಡೆ ಇನ್ನೂ ಕಾಂಗ್ರೆಸ್ ಪಕ್ಷಕ್ಕೇ ಸೇರದ ಜೆಡಿಎಸ್‌ನ ಕಳಲೆ ಕೇಶವಮೂರ್ತಿ, ನಂಜನಗೂಡು ಉಪಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇಲ್ಲ ಎಂದು ಓಡಾಡುತ್ತಿದ್ದು, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಮಾನ ಮರ್ಯಾದೆ ಇದೆಯಾ ಎಂದು ಕಿಡಿಕಾರಿದರು. ಅಲ್ಲದೆ ಕಾಂಗ್ರೆಸ್‌ನಲ್ಲೇ ಸಾಕಷ್ಟು ಅಭ್ಯರ್ಥಿಗಳಿದ್ದು, ಅವರನ್ನು ಕಣಕ್ಕಿಳಿಸಲು ಪಕ್ಷದ ನಾಯಕರಿಗೆ ಧೈರ್ಯವಿಲ್ಲ. ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ರಾಜ್ಯ ಸರ್ಕಾರವೇನು ಪತನ ವಾಗುವುದಿಲ್ಲ ಎಂದು ಹೇಳಿದರು.
ಯಾರೂ ಅನಿವಾರ್ಯವಲ್ಲ: ತಮ್ಮ ಆತ್ಮಗೌರವಕ್ಕೆ ಚ್ಯುತಿ ಬಂದಿದೆ ಎಂಬ ಕಾರಣ ನೀಡಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್‌ಗೆ ಯಾರು ಅನಿವಾರ್ಯವಲ್ಲ, ಬದಲಿಗೆ ಎಲ್ಲರಿಗೂ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಇದೆ. ಎಸ್.ಎಂ.ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಹಾಗೂ ಪ್ರಧಾನಿಮಂತ್ರಿ ಹುದ್ದೆಯನ್ನು ಹೊರತುಪಡಿಸಿ ಎಲ್ಲವನ್ನೂ ನೀಡಿದೆ. ಅಲ್ಲದೆ, ಎಸ್.ಎಂ.ಕೃಷ್ಣ ಅವರು ಮೂಲ ಕಾಂಗ್ರೆಸ್ಸಿಗರಲ್ಲ, ಅವರು ಪ್ರಜಾ ಸೋಷಲಿಸ್ಟ್ ಪಕ್ಷಕ್ಕೆ ಸೇರಿದವರು. ಕಾಂಗ್ರೆಸ್ ತೊರೆದಿರುವ ಕೃಷ್ಣ ತಾವು ಕಾಂಗ್ರೆಸ್ ಪಕ್ಷವನ್ನು ಮಾತ್ರ ತೊರೆದಿದ್ದು, ಸಕ್ರಿಯ ರಾಜಕೀಯವನ್ನಲ್ಲ ಎಂಬ ಹೇಳಿಕೆಯಲ್ಲಿ ಬಹಳ ಅರ್ಥವಿದೆ. ಹೀಗಾಗಿ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದರು.
ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಬೇಕಾದರೆ ಟೀಕಿಸಿ, ಬದಲಿಗೆ ಅವರ ಜಾತಿಯನ್ನು ಟೀಕಿಸಬೇಡಿ. ಇದು ಕುರುಬರ ಸರ್ಕಾರ ಎಂದು ಜಾಫರ್ ಷರೀಫ್ ಹೇಳುತ್ತಾರೆ, ಆದರೆ ಸರ್ಕಾರದಲ್ಲಿ ಎಷ್ಟು ಮಂದಿ ಕುರುಬರಿದ್ದಾರೆ ಹಾಗೂ ಎಷ್ಟು ಕುರುಬ ಅಧಿಕಾರಿಗಳಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.
“ಅಚ್ಛೆ ಇದೆ, ದಿನ್ ಇಲ್ಲ’
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಪ್ರಧಾನಿ ಮೋದಿ ಹೇಳುವ ಪ್ರಕಾರ ಬಜೆಟ್‌ನಲ್ಲಿ ಅಚ್ಛೆ ದಿನ್ ಇಲ್ಲ. ಬದಲಿಗೆ ಅಚ್ಛೆ
ಇದೆ ಹೊರತು, ದಿನ್ ಇಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒಳ್ಳೆಯ ಹಾಗೂ ಕೆಟ್ಟ ಅಂಶಗಳಿದ್ದು ಅಭಿವೃದ್ಧಿಗೆ ಪೂರಕವಾಗುವ ಅಂಶಗಳು ಬಜೆಟ್‌ನಲ್ಲಿ ಕಂಡುಬಂದಿಲ್ಲ. ನರೇಗಾ ಯೋಜನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಿರುವುದು ಸ್ವಾಗತರ್ಹ.
ಗ್ರಾಮೀಣಾಭಿವೃದ್ಧಿಗೆ ನೀಡಲಾಗುತ್ತಿರುವ 10 ಲಕ್ಷ ಕೋಟಿ ರೂ. ಯಾವ ಇಲಾಖೆಗೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಬಜೆಟ್‌ಗೂ ಮುನ್ನವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು ಎಂದು ಹೇಳಿದರು. ಇನ್ನು ರೈಲ್ವೆ ಬಜೆಟ್‌ನಲ್ಲಿ ಈ ಬಾರಿ ಮೈಸೂರಿಗೆ ಬಿಡಿಗಾಸು ನೀಡಿಲ್ಲ, ಹೊಸ ರೈಲು ವ್ಯವಸ್ಥೆಯನ್ನೂ ನೀಡಿಲ್ಲ. ಮೋದಿ ಈ ಹಿಂದೆ ಬಜೆಟ್ ಮಂಡಿಸಿದಾಗ ಬುಲೆಟ್ ರೈಲಿನ ಬಗ್ಗೆ ಪ್ರಸ್ತಾಪಿಸಿದ್ದರೂ, ಆದರೆ, ಈ ಬಾರಿಯ ಬಜೆಟ್‌ನಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ.
ಮೈಸೂರು- ಕುಶಾಲನಗರಕ್ಕೆ ರೈಲು ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿ ಇದೀಗ ಅದನ್ನು ಕೈಬಿಡಲಾಗಿದ್ದು, ಸ್ವಿಸ್ ಬ್ಯಾಂಕ್‌ನಿಂದ ಹಣ ತರುವ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಜತೆಗೆ ನೋಟ್‌ಬ್ಯಾನ್‌ನಿಂದ ಎಷ್ಟು ಹಣ ಸಂಗ್ರಹವಾಗಿದೆ, ಅದನ್ನು ಯಾವುದಕ್ಕೆ ವಿನಿಯೋಗ ಮಾಡುತ್ತೇವೆ ಎಂದು ತಿಳಿಸಿಲ್ಲ ಎಂದರು.