ಮುಂಬಯಿ: ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿರುವುದು ಬಾಂಬೆ ಷೇರು ಪೇಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೂಡ ಸುಭದ್ರ ಸರಕಾರ ಸ್ಥಾಪನೆಯಾಗಲಿದೆ ಎಂಬ ಹೂಡಿಕೆದಾರರ ವಿಶ್ವಾಸದಿಂದ ಸಂವೇದಿ ಸೂಚ್ಯಂಕ 1,383.93 ಪಾಯಿಂಟ್‌ಗಳಷ್ಟು ಜಿಗಿತ ಕಂಡಿದೆ.
ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು ಕೂಡ 5.81 ಲಕ್ಷ ಕೋ.ರೂ.ಗಳಿಗೆ ಪುಟಿದೆದ್ದಿದೆ. ಲಿಸ್ಟ್ ಆಗಿರುವ ಕಂಪೆನಿಗಳ ಬಂಡವಾಳ ಮೌಲ್ಯ 343.48 ಲಕ್ಷ ಕೋಟಿ ರೂ.ಗೆ ಏರಿದೆ. ಒಂದೇ ದಿನ ಸಂವೇದಿ ಸೂಚ್ಯಂಕ ಶೇ. 2.05ರಷ್ಟು ಹೆಚ್ಚಾಗಿದೆ.
ಮಧ್ಯಂತರದಲ್ಲಿ ಸೂಚ್ಯಂಕ ಗರಿಷ್ಠ 68,918.22ರ ವರೆಗೆ ಏರಿಕೆಯಾಗಿ ದಿನಾಂತ್ಯಕ್ಕೆ 68,865.12ರಲ್ಲಿ ಕೊನೆಗೊಂಡಿತು. 2022ರ ಮೇ 20ರ ಬಳಿಕ ಒಂದು ದಿನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೂಚ್ಯಂಕದ ಏರಿಕೆ ಇದಾಗಿದೆ. ನಿಫ್ಟಿ ಸೂಚ್ಯಂಕ ಕೂಡ 418.90 ಪಾಯಿಂಟ್ ಏರಿಕೆಯಾಗಿದ್ದು, 20,686.80ರಲ್ಲಿ ಮುಕ್ತಾಯವಾಗಿದೆ.
ಪ್ರಧಾನಿ ಮೋದಿಯವರು ರವಿವಾರ ಹೊಸ ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಸಂದರ್ಭ ಚುನಾವಣೆಗಳ ಫಲಿತಾಂಶ ಜಾಗತಿಕ ಬಂಡವಾಳ ಹೂಡಿಕೆ ದಾರರಿಗೆ ನೆಮ್ಮದಿ ನೀಡಲಿದೆ ಎಂದಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 80 ಅಮೆರಿಕನ್ ಡಾಲರ್‌ಗಳಿಗಿಂತ ಕಡಿಮೆ ಯಾದದ್ದು ಕೂಡ ಸೂಚ್ಯಂಕದ ಅಭೂತ ಪೂರ್ವ ಜಿಗಿತಕ್ಕೆ ಕಾರಣ. ಕಳೆದ ವಾರ ಬಿಎಸ್‌ಇ ಸೂಚ್ಯಂಕ 1,511.15 ಪಾಯಿಂಟ್ಸ್ ಏರಿಕೆಯಾಗಿದ್ದರೆ, ನಿಫ್ಟಿ 473.2 ಪಾಯಿಂಟ್ ಹೆಚ್ಚಾಗಿತ್ತು.