ಲೋಕಸಭೆಯ ಉಪಚುನಾವಣೆಗಳು, ಐದು ರಾಜ್ಯಗಳ ವಿಧಾನಸಭಾ ಚುನಾವಣ ಫಲಿತಾಂಶ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗಳ ಫಲಿತಾಂಶದ ಸಂದರ್ಭದಲ್ಲಿ ಯಾವುದೇ ರೀತಿಯ ವಿಜಯೋತ್ಸವ ನಡೆಸುವಂತಿಲ್ಲ ಎಂದು ಕೇಂದ್ರ ಚುನಾವಣ ಆಯೋಗ ಸೂಚನೆ ನೀಡಿರುವುದು ಸ್ವಾಗತಾರ್ಹ. ಈಗಾಗಲೇ ಚುನಾವಣೆ ನಡೆಸುವ ವಿಚಾರದಲ್ಲಿ ಮತ್ತು ಪ್ರಚಾರ ನಡೆಸಲು ಅವಕಾಶ ಮಾಡಿಕೊಟ್ಟಿರುವ ವಿಚಾರದಲ್ಲಿ ಚುನಾವಣ ಆಯೋಗದ ಪಾತ್ರದ ಬಗ್ಗೆ ಮದ್ರಾಸ್ ಹೈಕೋರ್ಟ್ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. ಇದರಿಂದ ಜಾಗೃತವಾಗಿರುವ ಆಯೋಗ, ಈಗ ಫಲಿತಾಂಶದ ಸಂದರ್ಭದಲ್ಲಿ ಯಾವುದೇ ರೀತಿಯ ವಿಜಯೋತ್ಸವ ಮಾಡ ಕೂಡದು ಎಂದು ಸೂಚಿಸಿದೆ. ಹಾಗೆಯೇ ಮತ ಎಣಿಕೆ ಕೇಂದ್ರಕ್ಕೆ ತೆರಳುವಾಗ ಪಕ್ಷಗಳ ಏಜೆಂಟರು ನೆಗೆಟಿವ್ ವರದಿ ಅಥವಾ 2 ಬಾರಿ ಲಸಿಕೆ ಪಡೆದಿರಬೇಕು ಎಂಬ ಮಾರ್ಗಸೂಚಿ ಮಾಡಿರುವುದು ಸ್ವಾಗತಾರ್ಹವಾಗಿದೆ.
ಇದರ ಜತೆಗೆ ಗೆದ್ದ ಅಭ್ಯರ್ಥಿಗಳು ಪ್ರಮಾಣ ಪತ್ರ ಪಡೆಯಲು ತಮ್ಮ ಜತೆಗೆ ಕೇವಲ ಇಬ್ಬರನ್ನು ಕರೆದೊಯ್ಯಬೇಕು ಎಂದೂ ಸೂಚಿಸಿದೆ. ಕೇಂದ್ರ ಚುನಾವಣ ಆಯೋಗದ ಈ ನಿರ್ಧಾರದ ಹಿಂದೆ ಮದ್ರಾಸ್ ಹೈಕೋರ್ಟ್‌ನ ತೀರ್ಪು ಇರುವುದು ಸ್ಪಷ್ಟ. ತಮಿಳುನಾಡಿನಲ್ಲಿ ಕೊರೊನಾ ಕೇಸ್ ಹೆಚ್ಚಳವಾದ ಬೆನ್ನಲ್ಲೇ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಚಾರದಲ್ಲಿ ಹೆಚ್ಚು ಜನ ಸೇರದಂತೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿತ್ತು. ಜತೆಗೆ ಫಲಿತಾಂಶದ ವೇಳೆ ಹೆಚ್ಚು ಜನ ಸೇರಿ, ಕೇಸ್ ಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಿತ್ತು.
ಮದ್ರಾಸ್ ಹೈಕೋರ್ಟ್‌ನ ಈ ತೀರ್ಪಿನ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ತೆಲಂಗಾಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರದ ವೇಳೆ ಕೊರೊನಾದ ಎಲ್ಲ ನಿಯಮಾವಳಿ ಮೀರಿ ಜನ ಸೇರಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ನಡೆದ ಪ್ರಚಾರದ ವೇಳೆ ಟಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ, ರಸ್ತೆ ರ್ಯಾಲಿ ನಡೆಸಿದ್ದಾರೆ. ಇದು ಆಕ್ಷೇಪಕ್ಕೂ ಕಾರಣವಾಗಿದೆ.
ಇನ್ನು ಪಶ್ಚಿಮ ಬಂಗಾಲದಲ್ಲಿ ಗುರುವಾರ ಕಡೆಯ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲೂ ಕೇಂದ್ರ ಚುನಾವಣ ಆಯೋಗ, ಕೊರೊನಾ ನಿಯಮಾವಳಿ ಪಾಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ಹೊತ್ತಿದೆ. ಏಕೆಂದರೆ, ಚುನಾವಣ ಕಾರ್ಯದಲ್ಲಿ ನಿರತರಾಗಿದ್ದ ಹಲವಾರು ಪೊಲೀಸರು, ಇತರ ಸಿಬಂದಿ ಕೊರೊನಾಗೆ ತುತ್ತಾಗಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಎಲ್ಲ ಮುಂಜಾಗ್ರತೆ ಇರಿಸಿಕೊಂಡು ಆಯೋಗ ಚುನಾವಣೆ ನಡೆಸಲೇಬೇಕಿದೆ.
ಉಳಿದಂತೆ ಮೇ 2ರಂದು ಎಲ್ಲ 5 ರಾಜ್ಯಗಳ ಮತ್ತು ಕರ್ನಾಟಕದಲ್ಲಿನ ಎರಡು ವಿಧಾನಸಭೆ ಕ್ಷೇತ್ರ ಮತ್ತು ಒಂದು ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಸಂದರ್ಭದಲ್ಲಿ ಆಯೋಗ ಎಷ್ಟೇ ನಿಯಮಾವಳಿ ರೂಪಿಸಿದ್ದರೂ ಇದನ್ನು ಮೀರುವುದು ನಮ್ಮ ಜನರಿಗೆ ಅಭ್ಯಾಸವಾಗಿದೆ. ಆದರೆ ಮೇ 2ರಂದು ಮಾತ್ರ ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳಾಗಲಿ ಅಥವಾ ಜನರಾಗಲಿ ಕೋವಿಡ್ ನಿಯಮಾವಳಿ ಮೀರದೇ ಇರಲಿ. ಮೇಲಾಗಿ, ಎಲ್ಲ ಪ್ರಮುಖ ಪಕ್ಷಗಳು, ತಮ್ಮ ಕಾರ್ಯಕರ್ತರಿಗೆ ಒಂದೆಡೆ ಸೇರದಂತೆ ಹೇಳಬೇಕಿದೆ. ಹೀಗಾದಲ್ಲಿ ಮಾತ್ರ ಈಗಾಗಲೇ ಹೆಚ್ಚಾಗಿರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣಬಹುದು. ಒಂದು ವೇಳೆ ಈ ಸಂದರ್ಭದಲ್ಲೂ ನಿಯಮಾವಳಿ ಮುರಿದರೆ 2ನೇ ಅಲೆ ಜತೆಗೆ ಮತ್ತೂಂದು ಅಲೆ ಎದುರಾಗುವ ಎಲ್ಲ ಅಪಾಯಗಳಿವೆ.