ಹೈದರಾಬಾದ್: ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ನಡೆಸಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಈ ಬಾರಿ ಅಧಿಕಾರದಿಂದ ಕೆಳಕ್ಕಿಳಿಯುವ ಲಕ್ಷಣಗಳು ಗೋಚರಿಸುತ್ತಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ರವಿವಾರ ನಡೆಯುತ್ತಿದೆ. 119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 60 ಕ್ಷೇತ್ರಗಳನ್ನು ಗೆಲ್ಲಬೇಕಾಗಿದೆ.
11.30ರವರೆಗಿನ ಫಲಿತಾಂಶದ ಪ್ರಕಾರ ಕಾಂಗ್ರೆಸ್ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಪಕ್ಷವು 38 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಈ ಪ್ರವೃತ್ತಿ ಮುಂದುವರಿದರೆ, ಭಾರತದ ಅತ್ಯಂತ ಯುವ ರಾಜ್ಯದಲ್ಲಿ ಮೊದಲ ಬಾರಿ ಮತ್ತೊಂದು ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 2014ರಲ್ಲಿ ತೆಲಂಗಾಣ ರಾಜ್ಯ ಹುಟ್ಟಿದಾಗಿನಿಂದ ಬಿಆರ್‌ಎಸ್ ಅಧಿಕಾರದಲ್ಲಿದೆ.
ಇದನ್ನೂ ಓದಿ:Dinesh Phadnis: ʼಸಿಐಡಿʼ ಧಾರಾವಾಹಿಯ ನಟನಿಗೆ ಹೃದಯಾಘಾತ
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದಾರೆ. ಸದ್ಯ ಗಜ್ವೇಲ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ತೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದಾರೆ.
ಸಿರ್ಸಿಲಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿರುವ ಕೆಸಿಆರ್ ಪುತ್ರ ಕೆಟಿ ರಾಮರಾವ್ ಅವರು ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಇದೀಗ ಮುನ್ನಡೆಯಲ್ಲಿದ್ದಾರೆ.