Advertisement

ಪಕ್ಷ ಪ್ರೀತಿ “ನಗಣ್ಯ’; ಕರ್ತವ್ಯ ಪ್ರಜ್ಞೆ “ಅಗ್ರಗಣ್ಯ’

11:49 PM Apr 03, 2023 | Team Udayavani |

ಬೆಂಗಳೂರು: “ಓಟ್‌ ಹಾಕುವ ವಿಚಾರ ಬಂದಾಗ ಪಕ್ಷದ ಮೇಲಿನ ಪ್ರೀತಿ ನಗಣ್ಯ; ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ ಎಂಬ ಭಾವನೆಯೇ ಅಗ್ರಗಣ್ಯ…’

Advertisement

ಇದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನಡೆಸಿರುವ ಸಮೀಕ್ಷೆಯಲ್ಲಿ ಮೂಡಿ ಬಂದ ಅಭಿಪ್ರಾಯ.

ಈ ಸಮೀಕ್ಷೆಯಲ್ಲಿ ತಾನು ಪಕ್ಷದ ಹಿತೈಷಿ ಅಥವಾ ಪಕ್ಷದ ಮೇಲಿನ ಪ್ರೀತಿಗಾಗಿ ಓಟ್‌ ಹಾಕುತ್ತೇವೆ ಎಂದು ಹೇಳಿದವರು ಕೇವಲ ಶೇ.4.4ರಷ್ಟು ಜನ ಮಾತ್ರ. ಉಳಿದಂತೆ ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿದವರು ಶೇ. 79.3ರಷ್ಟು ಮಂದಿ. ಇದೇ ವೇಳೆ ಒಳ್ಳೆಯ ಅಭ್ಯರ್ಥಿ ಎಂಬ ಕಾರಣಕ್ಕೆ ಓಟ್‌ ಹಾಕುತ್ತೇವೆ ಎಂದು ಹೇಳಿಕೊಂಡವರು ಶೇ.51ರಷ್ಟು ಜನ.

ಚುನಾವಣೆ ಅಂದ ಮೇಲೆ ಪಕ್ಷಗಳ ಪ್ರಭಾವ ಕಡೆಗಣಿಸುವಂತಿಲ್ಲ. ಆದರೆ, ಸಮೀಕ್ಷೆಯಲ್ಲಿ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದೊಂದು ಅತಿಶಯೋಕ್ತಿ ಎನಿಸಿದರೂ, ರಾಜಕೀಯ ಪಕ್ಷಗಳ ಮೇಲೆ ಜನರಲ್ಲಿ ಮೂಡುತ್ತಿರುವ ನಕರಾತ್ಮಕ ಭಾವನೆಗಳ ಸಣ್ಣ ದಿಕ್ಸೂಚಿ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಮತದಾನ ಮಾಡಲು ಮತದಾರರಿಗೆ ಯಾವ ಅಂಶಗಳು ಪ್ರೇರಣೆ ನೀಡುತ್ತೇವೆ, ಯಾವುದು ಹೆಚ್ಚು ಪ್ರಭಾವ ಬೀರುತ್ತದೆ ಎಂದು ಗುರುತಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಪ್ರತಿ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಆ ಜಿಲ್ಲೆಯ ಗ್ರಾಮೀಣ ಮತ್ತು ನಗರ ವಿಧಾನಸಭಾ ಕ್ಷೇತ್ರಗಳಲ್ಲಿ 4 ರಿಂದ 5 ಸಾವಿರ ಜನರನ್ನು ಸಂಪರ್ಕಿಸಿ ಅಭಿಪ್ರಾಯಗಳನ್ನು ಕೇಳಲಾಗುತ್ತದೆ. ಈ ಸಮೀಕ್ಷೆಯ ಸಂದರ್ಭದಲ್ಲಿ ಸಂಪರ್ಕಿಸುವ ಜನರ ಸಂಖ್ಯೆ ಕಡಿಮೆ ಇರಬಹುದು. ಆದರೆ, ಇದರಿಂದ ಮತದಾರರ ಭಾವನೆಗಳು ಹೇಗಿವೆ ಎಂಬುದರ ಚಿತ್ರಣ ಸಿಗುತ್ತದೆ.

ಈ ಸಮೀಕ್ಷೆಯಲ್ಲೂ “ನಗರವಾಸಿಗಳ ಉದಾಸಿನತೆ’ ಕಂಡು ಬಂದಿದೆ. ಪಕ್ಷ ಗೊತ್ತಿಲ್ಲ, ಪಕ್ಷದ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದ ಒಟ್ಟು ಶೇ.4.4ರಷ್ಟು ಜನರ ಪೈಕಿ ನಗರ ವಾಸಿಗಳು ಶೇ.5.6 ಇದ್ದರೆ, ಶೇ.3.2ರಷ್ಟು ಜನ ಗ್ರಾಮೀಣ ವಾಸಿಗಳಿದ್ದಾರೆ. ಮತದಾನ ನಮ್ಮ ಹಕ್ಕು ಎಂದು ಹೇಳಿದವರಲ್ಲಿ ನಗರವಾಸಿಗಳು ಶೇ.75ರಷ್ಟಿದ್ದರೆ, ಗ್ರಾಮೀಣ ವಾಸಿಗಳು ಶೇ.83ರಷ್ಟಿದ್ದಾರೆ. ಅಭ್ಯರ್ಥಿ ಒಳೆಯವರು ಎಂಬ ಕಾರಣಕ್ಕೆ ಓಟ್‌ ಹಾಕುತ್ತೇವೆ ಎಂದು ಹೇಳಿದವರ ಪೈಕಿ ಶೇ.48ರಷ್ಟು ನಗರವಾಸಿಗಳಿದ್ದರೆ, ಶೇ.53ರಷ್ಟು ಗ್ರಾಮೀಣ ವಾಸಿಗಳಿದ್ದಾರೆ.

Advertisement

ನನ್ನ ಹಕ್ಕು ಮತ್ತು ಕರ್ತವ್ಯ ಎಂಬ ಕಾರಣಕ್ಕೆ ಓಟ್‌ ಹಾಕುತ್ತೇವೆ ಎಂದು ಹೇಳಿದವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಶೇ.79ರಷ್ಟು ಮಹಿಳೆಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಪುರುಷರ ಸಂಖ್ಯೆ ಶೇ.78 ಇದೆ. ಅಭ್ಯರ್ಥಿ ಒಳ್ಳೆಯವರು ಎಂದು ಶೇ.54ರಷ್ಟು ಪುರುಷರು ಹೇಳಿದರೆ, ಇದರಲ್ಲಿ ಮಹಿಳೆಯರ ಸಂಖ್ಯೆ ಶೇ.47ರಷ್ಟಿದೆ. ಅಭ್ಯರ್ಥಿ ನಮ್ಮ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಓಟ್‌ ಹಾಕುತ್ತೇವೆ ಎಂದು ಶೇ.7ರಷ್ಟು ಮಹಿಳೆಯರು ಮತ್ತು ಶೇ.6.8 ಪುರುಷರು ಇದ್ದಾರೆ.

60 ದಾಟಿದವರೇ ಮುಂದು
ಓಟ್‌ ಹಾಕುವುದು ನನ್ನ ಕರ್ತವ್ಯ ಮತ್ತು ಹಕ್ಕು ಆಗಿದೆ. ಅದೇ ರೀತಿ ಅಭ್ಯರ್ಥಿ ಒಳ್ಳೆಯವರು ಎಂದು ಓಟ್‌ ಹಾಕುತ್ತೇವೆ ಎಂದು ಹೇಳಿದವರು ಪೈಕಿ 60 ವರ್ಷ ದಾಟಿದವರೇ ಹೆಚ್ಚಿದ್ದಾರೆ. ಓಟ್‌ ನನ್ನ ಕರ್ತವ್ಯ ಎಂದು ಶೇ.84ರಷ್ಟು ಮತ್ತು ಉತ್ತಮ ಅಭ್ಯರ್ಥಿ ಎಂದು ಶೇ.55ರಷ್ಟು ಜನ 61 ವರ್ಷ ಮೇಲ್ಪಟ್ಟವರು ಹೇಳಿದ್ದಾರೆ. ಪಕ್ಷದ ಮೇಲಿನ ಪ್ರೀತಿ 26ರಿಂದ 35 ವರ್ಷದವರಲ್ಲಿ ಹೆಚ್ಚು (ಶೇ.5) ಇದ್ದಾರೆ. ಕಳವಳಕಾರಿ ಅಂಶವೆಂದರೆ 18-15 ವರ್ಷದವರಲ್ಲಿ ಮತದಾನ ನನ್ನ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿದವರು ಶೇ.60ರಷ್ಟು ಮಾತ್ರ. ಕರ್ತವ್ಯ ಪ್ರಜ್ಞೆ ಅವಿದ್ಯಾವಂತರಲ್ಲೇ ಹೆಚ್ಚು ಕಂಡು ಬಂದಿದ್ದು, ಓಟ್‌ ನನ್ನ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿದ ಅವಿದ್ಯಾವಂತರ ಪ್ರಮಾಣ ಶೇ.83 ಆಗಿದೆ. ಅದೇ ರೀತಿ ಓಟ್‌ ನನ್ನ ಕರ್ತವ್ಯ ಎಂದು ಶೇ.83ರಷ್ಟು ಕೃಷಿಕರು, ಕಾರ್ಮಿಕರು ಹೇಳಿದ್ದಾರೆ. ಅಭ್ಯರ್ಥಿ ಒಳ್ಳೆಯವರು ಎಂದು ಹೇಳಿದವರಲ್ಲೂ ಕೃಷಿಕರು-ಕಾರ್ಮಿಕರೇ ಹೆಚ್ಚಿದ್ದಾರೆ.

ಓಟ್‌ ಹಾಕಲು ಪ್ರೇರಣೆ/ಪ್ರಭಾವ
ಪಕ್ಷ ಪ್ರೀತಿ ಶೇ.4.4
ಬೆದರಿಕೆ ಶೇ.3.1
ಕುಟುಂಬದ ಹಿರಿಯರ ಆಜ್ಞೆ ಶೇ.4.5
ಸ್ನೇಹಿತರ ಪ್ರಭಾವ ಶೇ.4.9
ಇನ್ನೊಬ್ಬರನ್ನು ಸೋಲಿಸಲು ಶೇ.5.4
ನನ್ನ ಹಕ್ಕು/ಕರ್ತವ್ಯ ಶೇ.79
ಚುನಾವಣಾ ಆಯೋಗದ ಪ್ರಚಾರ ಶೇ.4.9
ಮತದಾರ ಪಟ್ಟಿಯಲ್ಲಿ ಹೆಸರು ಇದೆ ಶೇ.13.1
ಉತ್ತಮ ಅಭ್ಯರ್ಥಿ ಶೇ 51
ಸ್ವಜಾತಿ ಅಭ್ಯರ್ಥಿ ಶೇ.6.9
ಅಭ್ಯರ್ಥಿ ಖುದ್ದು ಭೇಟಿ ಶೇ.3.8
ಹಣ-ಮದ್ಯದ ಆಮಿಷ ಶೇ.2

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next