Advertisement
ಬಿಜೆಪಿ ಮಂಗಳವಾರ ಕಾರವಾರದಲ್ಲಿ ಸಮಾವೇಶ ನಡೆಸಿದ್ದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕಾರ್ಯ ಮಾಡಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಮೇಲೆ ಮಾಜಿ ಶಾಸಕರ ಸತತ ದಾಳಿ ತಡೆಯಲು ಈ ಸಮಾವೇಶ ಸಹಕಾರಿಯಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಕಾಂಗ್ರೆಸ್ ಪಕ್ಷದಲ್ಲಿರುವ ಸೈಲ್ ಗಟ್ಟಿಯಾಗಿ ಪಕ್ಷದ ಹೆಸರು ಹೇಳದೆ, ವ್ಯಕ್ತಿ ಕೇಂದ್ರಿತ ಪ್ರಚಾರ ನಡೆಸುತ್ತಿದ್ದಾರೆ. ಮತ್ತೂಬ್ಬ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಳೆದ ಶನಿವಾರ ಜೆಡಿಎಸ್ ನಾಯಕರನ್ನು ಭೇಟಿಯಾಗಿ ಪಂಚರತ್ನ ಯಾತ್ರೆಯನ್ನು ಕಾರವಾರಕ್ಕೂ ತರುವ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದೆಯಲ್ಲದೇ ಜೆಡಿಎಸ್ ಅಭ್ಯರ್ಥಿಯಾಗಿ ಕಾರವಾರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸುಳಿವು ಸಹ ದೊರೆತಿದೆ. ಕಾರವಾರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿ ಇಲ್ಲಿ ತನ್ನ ನೆಲೆ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.
Related Articles
Advertisement
ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಕುಮಟಾದಲ್ಲಿ ನೆಲೆ ಇದೆ. ಇದು ಮಾಜಿ ಸಿಎಂ ಕುಮಾರಸ್ವಾಮಿಯವರಿಗೂ ಗೊತ್ತು. ಕಳೆದ ಚುನಾವಣಾ ಸಮಯದಲ್ಲಿ ಬಿಜೆಪಿಯಿಂದ ಸಿಡಿದು ಬಂದು ಶಕ್ತಿ ಪ್ರದರ್ಶಿಸಿದ್ದ ಸೂರಜ್ ನಾಯ್ಕ ಸೋನಿ ಜೆಡಿಎಸ್‌ನಲ್ಲಿ ಇದ್ದು ಪಕ್ಷ ಬಲಪಡಿಸಿದ್ದಾರೆ.ಕುಮಟಾ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸೂರಜ್ ನಾಯ್ಕ ಗುರುತಿಸುವಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಅತಿಯಾದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹಾಗೂ ಹಾಲಿ ಬಿಜೆಪಿ ಶಾಸಕರ ಮೇಲೆ ಪಕ್ಷದಲ್ಲಿರುವ ಅಸಮಾಧಾನವನ್ನು ಸೂರಜ್ ಬಳಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನು ಅರಿತೇ ಜೆಡಿಎಸ್ ಗೋಕರ್ಣದಿಂದ ಪಂಚರತ್ನ ಯಾತ್ರೆ ಹಮ್ಮಿಕೊಂಡಿದೆ. ಅಘನಾಶಿನಿ ನದಿ ತೀರದ ಹಳ್ಳಿಗಳಲ್ಲಿ ಸಂಚರಿಸಲಿದೆ. ದೀವಗಿ, ಬರ್ಗಿ , ಹೆಗಡೆ, ಕಾಗಾಲ ಮುಂತಾದ ಹಳ್ಳಿಗಳಲ್ಲಿ ಒಂದು ದಿನ ಹಾಗೂ ಫೆ.9 ರಂದು ಹೊನ್ನಾವರ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಂಚರಿಸಲಿದೆ. ಕಾಂಗ್ರೆಸ್-ಜೆಡಿಎಸ್‌ಗೆ ಟಕ್ಕರ್ ಕೊಡಲೆಂದೇ ಚಕ್ರವರ್ತಿ ಸೂಲಿಬೆಲೆ ಪದೇ ಪದೇ ಕುಮಟಾಕ್ಕೆ ಆಗಮಿಸಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಬಿಜೆಪಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆಯನ್ನು ಕುಮಟಾ ಕ್ಷೇತ್ರಕ್ಕೆ ಅಪ್ಲೆ„ ಮಾಡಿದರೆ , ಕದನ ಕುತೂಹಲ ಏರ್ಪಡುವುದು ಖಚಿತ.
ಕಾಂಗ್ರೆಸ್ ಶಾರದಾ ಶೆಟ್ಟಿ ಅವರನ್ನೇ ಕಣಕ್ಕೆ ಇಳಿಸುತ್ತದೆಯೋ ಅಥವಾ ಯುವ ಶಕ್ತಿಗೆ ಮಣೆ ಹಾಕುತ್ತದೆಯೋ ಕಾದು ನೋಡಬೇಕಿದೆ. ಒಟ್ಟಾರೆ ಕರಾವಳಿಯ ಎರಡು ಪ್ರಮುಖ ಕ್ಷೇತ್ರಗಳಲ್ಲಿ ರಾಜಕೀಯ ಬಿರುಸು ಪಡೆದಿದ್ದು ಸಮಾವೇಷ ಯಾತ್ರೆಯ ಜಾತ್ರೆ ಜೋರಾಗಿದೆ.
ನಾಗರಾಜ್ ಹರಪನಹಳ್ಳಿ