ಬೆಂಗಳೂರು: ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆಗಳ ಪರಿಶೀಲನೆಗೆ ಮೂರು ದಿನಗಳ ರಾಜ್ಯ ಭೇಟಿಗೆ ಆಗಮಿಸಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ನೇತೃತ್ವದ ತಂಡ ಬುಧವಾರ ವಿಕಾಸಸೌದದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿತು.
ಈ ವೇಳೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಆಯುಕ್ತರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಚುನಾವಣಾ ಪ್ರಚಾರ, ನೀತಿ ಸಂಹಿತೆ ಜಾರಿ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರುಗಳನ್ನು ಸಲ್ಲಿಸಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿರುವ ಕೆಳಹಂತದ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದರೆ, ಜೆಡಿಎಸ್ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ವಿರುದ್ಧ ದೂರು ಕೊಟ್ಟಿದೆ. ದೂರುಗಳನ್ನು ಆಲಿಸಿದ ಮುಖ್ಯ ಚುನಾವಣಾ ಆಯುಕ್ತರು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ವಕ್ತಾರ ಕೆ.ದಿವಾಕರ ನೇತೃತ್ವದ ನಿಯೋಗ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಚುನಾವಣಾ ಕರ್ತವ್ಯದಲ್ಲಿರುವ ಕೆಳಹಂತದ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ನೀತಿ ಸಂಹಿತೆ ಜಾರಿ, ತಪಾಸಣೆ, ಪರಿಶೀಲನೆ ಎಂದು ಹೇಳಿಕೊಂಡು ಕೆಲವು ಕಡೆ ಕೆಳ ಹಂತದ ಅಧಿಕಾರಿಗಳು ತಮಗೆ ಇಲ್ಲದ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಇದು ಸಾಕಷ್ಟು ಕಿರಿಕಿರಿ ಮತ್ತು ಅನಗತ್ಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ. ಆದ್ದರಿಂದ ಯಾವ ಅಧಿಕಾರಿಗೆ ಎಷ್ಟು ಅಧಿಕಾರ ವ್ಯಾಪ್ತಿ ಇದೆಯೋ ಅದಕ್ಕೆ ತಕ್ಕಂತೆ ನಡೆದುಕೊಳ್ಳುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿತು.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ “ವಿಕಾಸಪರ್ವ’ ಯಾತ್ರೆ ವೇಳೆ ಕೆಲವು ಕಡೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ರೀತಿ ಪಕ್ಷದ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ನಡೆಯುವ ಜಾತ್ರೆ ಇನ್ನಿತರ ಧಾರ್ಮಿಕ ಉತ್ಸವಗಳಿಗೆ ನೀತಿ ಸಂಹಿತೆ ನೆಪದಲ್ಲಿ ಅಡ್ಡಿಪಡಿಸಲಾಗುತ್ತಿರುವುದು ಸರಿಯಲ್ಲ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿರುವುದರಿಂದ ದೂರದ ಭಾಗಗಳಿಗೆ ಪಕ್ಷದ ಪ್ರಚಾರ ಸಾಮಾಗ್ರಿಗಳು ದೊಡ್ಡ ಪ್ರಮಾಣದಲ್ಲಿ ಸಾಗೀಸಬೇಕಾಗಿರುವುದರಿಂದ ಪ್ರಚಾರ ಸಾಮಾಗ್ರಿಗಳ ಸಾಗಾಣಿಕೆಗೆ ಮಿತಿ ಹೇರಬಾರದು ಎಂದು ಮನವಿ ಮಾಡಿದೆ.
ಇಂದು ಅಧಿಕಾರಿಗಳ ಸಭೆ
ಮೂರು ದಿನಗಳ ಭೇಟಿಗೆ ಆಗಮಿಸಿರುವ ಕೇಂದ್ರ ಚುನಾವಣಾ ಆಯೋಗದ ತಂಡ ಗುರುವಾರ ಜಿಲ್ಲಾ ಚುನಾವಣಾಧಿಕಾರಿಗಳು ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಿದ್ದತೆಗಳ ಪರಿಶೀಲನೆ ನಡೆಸಲಿದೆ. ಅಲ್ಲದೇ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆಗೂ ಆಯೋಗ ಸಭೆ ನಡೆಸಲಿದೆ.