ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಜೂ. 27ರಿಂದ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ.
ಜೂ. 29ರಂದು ಕೂಡಲಸಂಗಮದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅದರ ಸಲುವಾಗಿ ಜೂ. 27ರಂದು ಆಗಮಿಸಲಿರುವ ವೇಣುಗೋಪಾಲ್ ಅವರು ಸುಮಾರು 20 ದಿನ ರಾಜ್ಯದಲ್ಲಿದ್ದು, ವಿವಿಧೆಡೆ ಪಕ್ಷ ಸಂಘಟನೆ ಕುರಿತಂತೆ ಸಭೆ ನಡೆಸುವರು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಸಲುವಾಗಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಬರಲಿದ್ದಾರೆ. ಜೂ. 29ರಂದು ಕೂಡಲಸಂಗಮದ ಸಭೆ ಬಳಿಕ ಜೂ. 30ರಂದು ಅಥಣಿಯಲ್ಲಿ ನಡೆಯುವ ಸಭೆಯಲ್ಲಿ ಅವರು ಪಾಲ್ಗೊಳ್ಳುವರು. ನಂತರ ಹಾಸನ ಸೇರಿದಂತೆ ವಿವಿದೆಡೆ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.
ಡಾ.ಜಿ.ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ಗೃಹ ಖಾತೆಗೆ ನೀವು ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಈಗ ನೆಮ್ಮದಿಯಾಗಿದ್ದೇನೆ. ನೆಮ್ಮದಿಯಾಗಿರುವುದು ನಿಮಗಿಷ್ಟವಿಲ್ಲವೇ ಎಂದು ಮರುಪ್ರಶ್ನೆ ಹಾಕಿದರು. ಗೃಹ ಖಾತೆ ನೆಮ್ಮದಿ ಇಲ್ಲದ ಖಾತೆಯೇ ಎಂಬ ಮತ್ತೂಂದು ಪ್ರಶ್ನೆಗೆ, ಅದನ್ನೆಲ್ಲಾ ಹೇಳಲು ಸಾಧ್ಯವಿಲ್ಲ. ಈಗ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಗಮನಹರಿಸುತ್ತಿದ್ದೇನೆ ಎಂದರು.
ರಾಜ್ಯದಲ್ಲೀಗ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಆಗಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಶಿವಕುಮಾರ್, ವಿಶ್ವನಾಥ್‌ಗೆ ಹಾಗೆ ಅನಿಸಿರಬಹುದು. ಆದರೆ. ನಮಗಾರಿಗೂ ಆ ರೀತಿ ಎನಿಸಿಲ್ಲ. ವಿಶ್ವನಾಥ್ ನಮಗಿಂತ ಹಿರಿಯರು. ಅವರ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ ಎಂದಷ್ಟೇ ಹೇಳಿದರು.