ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ರಚನೆಗಾಗಿ ಸರಕಾರದಿಂದ ಚುನಾವಣಾ ಸಿದ್ಧತೆ ಶುರುವಾಗಿವೆ. ಕೆಲವರಲ್ಲಿ ಗುರುತಿನ ಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲ. ಅಲ್ಲದೇ, ಹಮಾಲಿಗಳು, ಹೋಲ್‌ಸೇಲ್ ವರ್ತಕರ ಹೆಸರು ಪಟ್ಟಿಯಲ್ಲಿ ನುಸುಳಿದೆ ಎನ್ನಲಾಗಿದ್ದು, ಮತದಾರರ ಅಂತಿಮ ಪಟ್ಟಿಯೇ ಗೊಂದಲದ ಗೂಡಾಗಿದೆ.
ಕೇಂದ್ರ ಸರಕಾರದಿಂದ 2014-15 ರಲ್ಲಿ ಜಾರಿಗೊಳಿಸಿದ್ದ ಈ ಸಮಿತಿಗೆ ಪೌರಾಯುಕ್ತರು ಅಧ್ಯಕ್ಷರಾಗಿರಲಿದ್ದು, ಬೀದಿ ಬದಿ ವ್ಯಾಪಾರಸ್ಥರನ್ನು ಒಳಗೊಂಡಂತೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿತ್ತು. ಬಳಿಕ ಕರ್ನಾಟಕ ಬೀದಿ ವ್ಯಾಪಾರಿಗಳು (ಜೀವನೋಪಾಯ ಮತ್ತು ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು 2019- ನಿಯಮ ಅನ್ವಯ ಹಾಗೂ ಅನುಸೂಚಿ (ಷೆಡ್ನೂಲ್) ಕ್ರಮ ಸಂಖ್ಯೆ 2ರ ಅನ್ವಯ ಬೀದಿ ಬದಿ ವ್ಯಾಪಾರಸ್ಥರ ಪಟ್ಟಣ ಮಾರಾಟ ಸಮಿತಿಗೆ (ಬೀದಿ ಬದಿ ವ್ಯಾಪಾರಸ್ಥರ ಪ್ರತಿನಿಧಿಗಳನ್ನು) ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಉದ್ದೇಶಿಸಿದೆ.
ಈ ಸಮಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಗದಗ-ಬೆಟಗೇರಿ ನಗರಸಭೆ ಚುನಾವಣಾ ಸಿದ್ಧತೆ ನಡೆಸಿದೆ. ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನೂ ಪ್ರಕಟಿಸಿದೆ. ಆದರೆ, ಅಂತಿಮ ಪಟ್ಟಿಯಲ್ಲಿ ಹತ್ತಾರು ಲೋಪದೋಷಗಳು ಕಂಡು ಬಂದಿದ್ದು, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಪಟ್ಟಿಯಲ್ಲಿರುವ ಗೊಂದಲಗಳೇನು?: 2014-15 ರಲ್ಲಿ ಎನ್‌ಜಿಒಗಳ ಮೂಲಕ ಸರಕಾರವೇ ನಡೆಸಿದ್ದ ಸಮೀಕ್ಷೆಯಲ್ಲಿ ಅವಳಿ ನಗರದಲ್ಲಿ ಒಟ್ಟು 965 ಜನ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ, ಗುರುತಿನ ಚೀಟಿಯನ್ನೂ ವಿತರಿಸಿತ್ತು. ಪಟ್ಟಣ ಬೀದಿ ಬದಿ ವ್ಯಾಪಾರಸ್ಥರ ಸಮಿತಿಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ.
ಆದರೆ, ಸದ್ಯ ಗದಗ-ಬೆಟಗೇರಿ ನಗರಸಭೆ ಪ್ರಕಟಿಸಿರುವ ಪಟ್ಟಿಯಲ್ಲಿ 965 ಜನ ಸದಸ್ಯರಿದ್ದಾರೆ. ಗುರುತಿನ ಚೀಟಿ ಇಲ್ಲದ 75ಕ್ಕೂ ಹೆಚ್ಚು ಜನರು ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಆ ಪೈಕಿ ದಲ್ಲಾಳಿಗಳು, ಹೋಲ್ ಸೇಲ್ ವ್ಯಾಪಾರಿಗಳು, ಕಾರಕೂನರು ಹಾಗೂ ಹಮಾಲಿಗಳು ಸೇರಿ ಸುಮಾರು 20ಕ್ಕೂ ಹೆಚ್ಚು ಜನರ ಹೆಸರು ಸೇರ್ಪಡೆಯಾಗಿವೆ. ಇನ್ನುಳಿದಂತೆ ಬೆಟಗೇರಿ ಮಾರುಕಟ್ಟೆ 140 ಜನರಿಗೆ ಕಾರ್ಡ್ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲ. ಎಣ್ಣೆ, ತರಕಾರಿ, ಹೂವು, ಎಲೆ-ಅಡಿಕೆ ವ್ಯಾಪಾರಿಗಳ ಬಳಿ ಗುರುತಿನ ಚೀಟಿ ಇದ್ದರೂ ಅವರ ಹೆಸರು ಕೈ ತಪ್ಪಿವೆ ಎಂಬುದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಆರೋಪ.
-ವೀರೇಂದ್ರ ನಾಗಲದಿನ್ನಿ