Advertisement
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಕಡಬ ಮತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿಗಳನ್ನು ತಾಲೂಕಾಗಿ ವರ್ಷಗಳ ಹಿಂದೆ ಸರಕಾರ ಘೋಷಿಸಿತ್ತು. ಈಗ ಇಲ್ಲಿ ಹೊಸ ತಾಲೂಕು ಪಂಚಾಯತ್ ರಚನೆಗೆ ಆದೇಶಿಸಿದೆ. ಈಗಿನ ತಾ.ಪಂ. ಸದಸ್ಯರಿಗೆ ಇನ್ನು 1 ವರ್ಷ 3 ತಿಂಗಳು ಕಾಲಾವಧಿ ಇದ್ದು, ಅದರೊಳಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
Related Articles
ಘೋಷಣೆಯಾದ ಹೊಸ ತಾ.ಪಂ. ವ್ಯಾಪ್ತಿಯಲ್ಲಿ ಕಟ್ಟಡ ಸ್ವಂತ, ಬಾಡಿಗೆ ಲಭ್ಯವಿದ್ದರೆ ಅಥವಾ ಶೀಘ್ರ ಲಭ್ಯವಾದರೆ ಆ ಹೊತ್ತಿಗೆ ಅಲ್ಲಿ ತಾ.ಪಂ. ಅಸ್ತಿತ್ವಕ್ಕೆ ಬರಲು ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಮೈಸೂರು ಪ್ರಾದೇಶಿಕ ಆಯುಕ್ತರು ಪ್ರಕಟಿಸಲಿದ್ದಾರೆ. ಹಾಲಿ ಸದಸ್ಯರ ಅವಧಿ ಮುಗಿಯಲು ಬಾಕಿ ಇರುವ ಸಮಯದಲ್ಲಿ ಹೊಸ ಕಟ್ಟಡ, ಬಾಡಿಗೆ ಕಟ್ಟಡ ವ್ಯವಸ್ಥೆಯನ್ನು ಜಿ.ಪಂ. ಮಾಡಿ, ಎಲ್ಲ ತಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ವೇಳೆಯೇ ಹೊಸ ತಾ.ಪಂ.ಗೂ ಚುನಾವಣೆ ನಡೆಯಬಹುದು ಎಂದು ಜಿ.ಪಂ. ಮೂಲಗಳು ತಿಳಿಸಿವೆ.
Advertisement
ಅಸ್ತಿತ್ವದಲ್ಲಿರುವ ತಾ.ಪಂ.ಗಳಲ್ಲಿ ನಿಹಿತವಾಗಿ ಖರ್ಚು ಮಾಡದೆ ಉಳಿದ ನಿಧಿ ಮತ್ತು ಎಲ್ಲ ಇತರ ಸ್ವತ್ತುಗಳನ್ನು, ಸಂಬಂಧಪಟ್ಟ ಕಾರ್ಯ ನಿರ್ವಾಹಕ ಅಧಿಕಾರಿಗಳು ಶೇ.50ರಷ್ಟು ನಿಧಿಯನ್ನು ಪ್ರದೇಶದ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಶೇ.50ರಷ್ಟು ನಿಧಿಯನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜಿಸಲು ಸರಕಾರ ಸೂಚಿಸಿದೆ.
ಘೋಷಣೆ ಮಾಡಿರುವ ಹೊಸ ತಾಲೂಕಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಿ ಗಳು-ಸಿಬಂದಿ ನೇಮಕ ವಾಗಿಲ್ಲ. ಇದರ ಮಧ್ಯೆಯೇ ಹೊಸ ತಾ.ಪಂ. ಘೋಷಣೆ ಮಾಡಿರುವ ಕಾರಣದಿಂದ ಮುಂಬರುವ ಹೊಸ ಸದಸ್ಯರಿಗೆ ಮೂಲಸೌಕರ್ಯ ಸಮಸ್ಯೆಯೇ ಬಹುದೊಡ್ಡ ಸವಾಲಾಗಲಿದೆ.
ಹೊಸ ತಾ.ಪಂ.- ಹೊಸ ರಾಜಕೀಯ !ಹೊಸ ತಾ.ಪಂ. ರಚನೆಯಾದ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಹಾಲಿ ಇರುವ ತಾಲೂಕಿನ ಕೆಲವು ಕ್ಷೇತ್ರಗಳು ಹೊಸ ತಾ.ಪಂ.ಗೆ ಸೇರ್ಪಡೆಗೊಂಡ ಕಾರಣ ತಾ.ಪಂ.ನಲ್ಲಿ ಪಕ್ಷಗಳ ಬಲಾಬಲವೂ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಈಗಾಗಲೇ ಘೋಷಣೆ ಯಾದ ಹೊಸ ತಾಲೂಕುಗಳಲ್ಲಿ ತಾ.ಪಂ. ರಚನೆಗೆ ಸರಕಾರ ಆದೇಶಿಸಿದೆ. ಹಾಲಿ ತಾ.ಪಂ.ನ ಆಡಳಿತಾವಧಿ ಮುಗಿಯುವವರೆಗೆ ಸದಸ್ಯರು ಅಲ್ಲೇ ಸದಸ್ಯರಾಗಿರುತ್ತಾರೆ ಅಥವಾ ಘೋಷಣೆಯಾದ ಹೊಸ ತಾಲೂಕಿನಲ್ಲಿ ಸೂಕ್ತ ಕಟ್ಟಡ ವ್ಯವಸ್ಥೆಗಳಿದ್ದರೆ ಅಲ್ಲಿಗೆ ಈಗಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಜಾರಿಗೆ ತಂದು ಹೊಸ ತಾ. ಪಂ. ಅಸ್ತಿತ್ವಕ್ಕೆ ಬರಲಿದೆ. ಬಳಿಕ ಅಲ್ಲಿ ಚುನಾವಣೆ ನಡೆಯಲಿದೆ.
– ಡಾ| ಸೆಲ್ವಮಣಿ ಆರ್. ದ.ಕ. ಜಿ.ಪಂ. ಸಿಇಒ