Advertisement

ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಅಡ್ಡಿ

12:30 AM Jan 01, 2019 | |

ಬೆಂಗಳೂರು: ಹೊಸ ವರ್ಷದ ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 6 ಮಹಾನಗರ ಪಾಲಿಕೆಗಳು ಸೇರಿದಂತೆ 101ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಹೊರಡಿಸಿರುವ “ವಾರ್ಡ್‌ವಾರು ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ’ ಅಧಿಸೂಚನೆ ಅಡ್ಡಿಯಾಗಿದೆ.

Advertisement

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಸುಮಾರು 25ಕ್ಕೂ ಹೆಚ್ಚು ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಸದ್ಯ ಆ ಅರ್ಜಿಗಳು ವಿಚಾರಣಾ ಹಂತದಲ್ಲಿವೆ. ಅವುಗಳು ಇತ್ಯರ್ಥಗೊಳ್ಳುವವರೆಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲು ಮುಂದಡಿ ಇಡುವಂತಿಲ್ಲ.

ರಾಜ್ಯದ ಸುಮಾರು 215 ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಮೊದಲ ಹಂತದಲ್ಲಿ 105 ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟಂಬರ್‌ನಲ್ಲಿ ಚುನಾವಣೆ ನಡೆದಿದೆ. ಇದೀಗ ಹೊಸ ವರ್ಷದ ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ 101ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಿಸಿದ್ದ ಸರ್ಕಾರ ವಾರ್ಡ್‌ವಾರು ಮೀಸಲಾತಿ ಹಾಗೂ ವಾರ್ಡ್‌ ಮರುವಿಂಗಡಣೆ ನಿಗದಿಪಡಿಸಿ 2018ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಿಂದ ಚುನಾವಣಾ ಪ್ರಕ್ರಿಯೆ ಸದ್ಯ ನೆಗೆಗುದಿಗೆ ಬಿದ್ದಂತಾಗಿದೆ.

ಅರ್ಜಿದಾರರ ಆಕ್ಷೇಪವೇನು?
ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ಮೀಸಲಾತಿ ನಿಗದಿಪಡಿಸಿ ಹಾಗೂ ವಾರ್ಡ್‌ ಮರುವಿಂಗಡಣೆಗೊಳಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರಾಜಕೀಯ ಪ್ರೇರಿತ, ಸಂವಿಧಾನ ಹಾಗೂ ಕಾನೂನು ಬಾಹಿರವಾಗಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಕಡೆಗಣಿಸಿ ರಾಜಕೀಯ ಅಧಿಕಾರ ಪಡೆದುಕೊಳ್ಳಲು ಆಡಳಿತಾರೂಢ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿಪಡಿಸಿದೆ.ಇದರಲ್ಲಿ ಕರ್ನಾಟಕ ಪೌರ ನಿಗಮ ಕಾಯ್ದೆಯನ್ನು ಉಲ್ಲಂ ಸಲಾಗಿದೆ. ಮೀಸಲಾತಿ ಆವರ್ತನೆ ಪಾಲಿಸಿಲ್ಲ. ಆವರ್ತನೆಗೆ ಸಂಬಂಧಪಟ್ಟ ಸರ್ಕಾರದ ಮಾರ್ಗಸೂಚಿಗಳನ್ನು ಕಡೆಗಣಿಸಲಾಗಿದೆ. ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ ಅನ್ನುವುದು ಅರ್ಜಿದಾರರ ಆಕ್ಷೇಪವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ 2ನೇ ಹಂತದ ಚುನಾವಣೆ ನಡೆಸಲು ಆಯೋಗ ಎಲ್ಲ ರೀತಿಯಿಂದಲೂ ಸಿದ್ದವಾಗಿದೆ. ಫೆಬ್ರವರಿ ಕೊನೆ ಹಾಗೂ ಮಾರ್ಚ್‌ ತಿಂಗಳು ಪರೀಕ್ಷೆಗಳ ಕಾಲ. ಏಪ್ರೀಲ್‌ ತಿಂಗಳಿಂದ ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭಗೊಳ್ಳುತ್ತವೆ. ಹಾಗಾಗಿ, ನಮಗೆ ಉಳಿದಿರುವುದು ಫೆಬ್ರವರಿ ತಿಂಗಳು ಮಾತ್ರ. ಆದ್ದರಿಂದ ಫೆಬ್ರವರಿ ತಿಂಗಳ ಮೊದಲಾರ್ಧದಲ್ಲೇ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದೆ.

Advertisement

ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿಗೂ ಸಿಕ್ಕಿಲ್ಲ ಮುಕ್ತಿ
ಈ ಮಧ್ಯೆ ಸೆಪ್ಟಂಬರ್‌ನಲ್ಲಿ ನಡೆದ 105 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಗೂ ಇಲ್ಲಿತನಕ ಕಾನೂನು ಮುಕ್ತಿ ಸಿಕ್ಕಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಿ ಸರ್ಕಾರ ಮೊದಲು 2018ರ ಸೆ.3ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಕೆಲವೊಂದು ಬದಲಾವಣೆ ತಂದು ಸೆ.6ರಂದು ಮತ್ತೂಂದು ಅಧಿಸೂಚನೆ ಹೊರಡಿಸಲಾಯಿತು.  ಈ ಪರಿಷ್ಕೃತ ಅಧಿಸೂಚನೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆಗ ಸೆ.6ರ ಪರಿಷ್ಕೃತ ಅಧಿಸೂಚನೆ ವಾಪಸ್‌ ಪಡೆದ ಸರ್ಕಾರ, ಸೆ.3ರ ಮೂಲ ಅಧಿಸೂಚನೆಯಂತೆ ಮುಂದುವರಿಯುವುದಾಗಿ ಹೈಕೋರ್ಟ್‌ಗೆ ಹೇಳಿತ್ತು. ಆದರೆ, ಸೆ.6ರ ಪರಿಷ್ಕೃತ ಅಧಿಸೂಚನೆ ವಾಪಸ್‌ ಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಕೆಲವರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹಾಗಾಗಿ, ಚುನಾವಣೆ ನಡೆದ ಮೂರು ತಿಂಗಳು ಕಳೆದರೂ, 105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಜಾರಿಗೆ ಬಂದಿಲ್ಲ.

“ಚುನಾವಣೆಗೆ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಾರ್ಡ್‌ವಾರು ಮೀಸಲಾತಿ ಹಾಗೂ ವಾರ್ಡ್‌ ಮರುವಿಂಗಡಣೆ ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ. ಅದು ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ನ್ಯಾಯಾಲಯದಲ್ಲಿನ ಅರ್ಜಿಗಳು ಬೇಗ ಇತ್ಯರ್ಥಗೊಳ್ಳುತ್ತವೆ ಎಂಬ ವಿಶ್ವಾಸವಿದೆ. ನಿಗದಿಯಂತೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ’.
– ಪಿ.ಎನ್‌. ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next