Advertisement

ಸವಿ ಕನ್ನಡ ಕವಿಸಂಗೆ ಸಿಹಿ ಬೆಲ್ಲದ ಪ್ರಯತ್ನ

06:37 PM Jul 11, 2021 | Team Udayavani |

ವರದಿ: ಡಾ| ಬಸವರಾಜ ಹೊಂಗಲ್‌

Advertisement

ಧಾರವಾಡ: ಕನ್ನಡ ನಾಡು-ನುಡಿಯ ಪ್ರಾತಿನಿಧಿಕ ಸಂಸ್ಥೆ ಮತ್ತು ನೆಲ-ಜಲದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿದ್ದುಕೊಂಡು ನಾಡಿಗೆ ಮಾರ್ಗದರ್ಶನ ನೀಡುವ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮತ್ತೂಂದು ಚುನಾವಣೆ ಎದುರಾಗಿದ್ದು, ಕನ್ನಡದ ಕಟ್ಟಾಳುಗಳು ತೆರೆಮರೆಯಲ್ಲಿಯೇ ವಿವಿಧ ಹುದ್ದೆಗಳನ್ನೇರಲು ಸಜ್ಜಾಗುತ್ತಿದ್ದಾರೆ.

ಶತಮಾನೋತ್ಸವ ಆಚರಿಸಿಕೊಂಡು ಮತ್ತೂಂದು ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್ಯದ ಏಕೈಕ ಕನ್ನಡ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಈ ಬಾರಿ ನೂತನ ಅಧ್ಯಕ್ಷರಾದಿಯಾಗಿ ಹೊಸ ಮುಖಗಳು ಪ್ರವೇಶ ಪಡೆಯಲು ಕಸರತ್ತು ನಡೆಸಿದ್ದು, ಸಾಂಸ್ಕೃತಿಕ ರಾಜಕಾರಣದ ಕೇಂದ್ರಬಿಂದುವಾಗಿರುವ ಕವಿಸಂ ಚುನಾವಣೆಗೆ ಕೊರೊನಾ 2ನೇ ಅಲೆ ತಗ್ಗುತ್ತಿದ್ದಂತೆಯೇ ತೆರೆಮರೆಯಲ್ಲಿಯೇ ಕಸರತ್ತು ಆರಂಭಗೊಂಡಿದೆ.

ಸತತ 50 ವರ್ಷಗಳಿಗೂ ಅಧಿಕ ಕಾಲ ಕವಿಸಂ ಅಧ್ಯಕ್ಷ ಸ್ಥಾನ ಅಲಂಕರಿಸಿಕೊಂಡು ಬಂದು ವಿಶ್ವದಾಖಲೆಯನ್ನೇ ಬರೆದ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ನಿಧನದ ನಂತರ ಈ ದೊಡ್ಡ ಸಂಸ್ಥೆಯ ಸಾರಥ್ಯವನ್ನು ಯಾರಿಗೆ ವಹಿಸಬೇಕು ಎನ್ನುವ ವಿಚಾರ ಧಾರವಾಡದ ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಕನ್ನಡಾಭಿಮಾನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜಕೀಯದಿಂದ ದೂರವಿದ್ದು, ಸರ್ಕಾರಗಳಿಗೆ ಚಾಟಿ ಬೀಸಿ, ಕಿವಿಹಿಂಡಿ ಬುದ್ಧಿ ಹೇಳಿ ಕನ್ನಡ ಭಾಷೆ ಬೆಳೆಸಲು ಸದಾ ಕಟಿಬದ್ಧವಾಗಿರುವ ಕವಿಸಂನ ಸಾರಥ್ಯ ಅಷ್ಟೇ ತೂಕದ್ದಾಗಿರಬೇಕು ಎನ್ನುವ ಮಾತುಗಳು ಸಾಹಿತಿಗಳ ವಲಯದಲ್ಲಿ ಕೇಳಿ ಬರುತ್ತಿದ್ದು, ಅದಕ್ಕಾಗಿ ಬಲಿಷ್ಠ ವ್ಯಕ್ತಿಗಳ ಹುಡುಕಾಟ ನಡೆದಿದೆ.

ಹೊಸ ಮುಖಗಳಿಗೆ ವೇದಿಕೆ

Advertisement

ನಾಲ್ಕು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಕವಿಸಂಗೆ ಆಯ್ಕೆಯಾಗಿದ್ದ ಅಧ್ಯಕ್ಷ ನಾಡೋಜ ಡಾ|ಪಾಟೀಲ ಪುಟ್ಟಪ್ಪ, ಕೋಶಾಧ್ಯಕ್ಷರಾಗಿದ್ದ ಕೃಷ್ಣಾ ಜೋಶಿ, ಗೌರವ ಅಧ್ಯಕ್ಷರಾಗಿದ್ದ ಡಾ| ಸಿದ್ದಲಿಂಗಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಮೋಹನ ನಾಗಮ್ಮನವರ ಹಾಗೂ ಶಾಂತೇಶ ಸೇರಿ ಒಟ್ಟು ಐದು ಜನರು ಕಾಲವಾಗಿದ್ದು, ಇದೀಗ ನೂತನ ಚುನಾವಣೆಗೆ ಮತ್ತೆ ಹೊಸ ಮುಖಗಳು ಈ ಎಲ್ಲಾ ಹುದ್ದೆಗಳಿಗೆ ಆಯ್ಕೆಯಾಗಬೇಕಾಗಿದೆ.

ಚಂದ್ರಕಾಂತ ಬೆಲ್ಲದ ಕಸರತ್ತು

ಸತತ 4 ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಹಿರಿಯ ಸಜ್ಜನ ರಾಜಕಾರಣಿ ಮತ್ತು ಸಾಂಸ್ಕೃತಿಕ ಲೋಕದ ನಂಟು ಹೊಂದಿರುವ ಚಂದ್ರಕಾಂತ ಬೆಲ್ಲದ ಅವರು ಈಗಾಗಲೇ ತೆರೆಮರೆಯಲ್ಲಿಯೇ ಕವಿಸಂ ಅಧ್ಯಕ್ಷ ಸ್ಥಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಾಡೋಜ ಪಾಪು ನಿಧನರಾದ ನಂತರ ಉಳಿದ ಅವಧಿಗೆ ಚಂದ್ರಕಾಂತ ಬೆಲ್ಲದ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಈ ಹಿಂದಿನ ಅವಧಿಯಲ್ಲಿನ ಕೆಲ ಪದಾಧಿಕಾರಿಗಳು ಸಂಘದ ಸಭೆಯಲ್ಲಿ ಬೇಡಿಕೆ ಇಟ್ಟು ಪ್ರಯತ್ನ ನಡೆಸಿದ್ದರು. ಆದರೆ ಕಾನೂನು ಮತ್ತು ತಾಂತ್ರಿಕ ತೊಂದರೆಯಿಂದ ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷರಾಗಲಿಲ್ಲ. ಬೆಲ್ಲದ ಅವರು ಸರಳ ಮತ್ತು ಸಜ್ಜನ ರಾಜಕಾರಣಿ. ಸದ್ಯಕ್ಕೆ ಅವರೇನು ಬಿಜೆಪಿಯಲ್ಲಿಲ್ಲ. ಅವರನ್ನು ಕೇವಲ ಒಂದು ರಾಜಕೀಯ ಪಕ್ಷದ ಅಭ್ಯರ್ಥಿಯನ್ನಾಗಿ ನೋಡದೇ ಸಾಂಸ್ಕೃತಿಕ ಲೋಕದ ಒಡನಾಡಿ ಎಂದು ನೋಡಬೇಕು. ಹೀಗಾಗಿ ಅವರನ್ನೇ ಕವಿಸಂ ಮುಂದಿನ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎನ್ನುವ ಮಾತುಗಳು ಸಾಹಿತ್ತಿಕ ವಲಯದಲ್ಲೂ ಕೇಳಿ ಬರುತ್ತಿವೆ. ಆದರೆ ಈಗಾಗಲೇ ಚಂದ್ರಕಾಂತ ಅವರ ಖಾಸಾ ಸಹೋದರ ಶಿವಣ್ಣ ಬೆಲ್ಲದ ಅವರು ಸಂಘದ ಕಾರ್ಯಾಧ್ಯಕ್ಷರಾಗಿದ್ದಾರೆ. ಹೀಗಿರುವಾಗ ಇಲ್ಲಿಯೂ ಒಂದೇ ಕುಟುಂಬದ ಇಬ್ಬರು ಎರಡು ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡರೆ ಹೇಗೆ? ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next