ಬೆಂಗಳೂರು: ರಾಜ್ಯದ ವಿವಿಧ ನಿಗಮ-ಮಂಡಳಿಗಳ ನಿರ್ದೇಶಕರು ಮತ್ತು ಸದಸ್ಯರ ಆಯ್ಕೆಗೆ ಕೊನೆಗೂ ಕಾಲ ಸನ್ನಿಹಿತವಾಗಿದ್ದು, ಈ ಸಂಬಂಧದ ಸಮಿತಿಯು ಸೆಪ್ಟಂಬರ್ 3ರಂದು ಸಭೆ ಸೇರಲಿದೆ.
ನಿಗಮ-ಮಂಡಳಿಗಳ ಸದಸ್ಯರು ಮತ್ತು ನಿರ್ದೇಶಕ ಹುದ್ದೆಗಾಗಿ ಆಕಾಂಕ್ಷಿಗಳಿಂದ ಈಗಾ ಗಲೇ ಗೃಹ ಸಚಿವ ಡಾ| ಜಿ. ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿಯು ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿದೆ. ನೇರವಾಗಿ ಪಕ್ಷದ ಕಚೇರಿಗೂ ಆಯಾ ಭಾಗದ ನಾಯಕರ ಶಿಫಾರಸಿನೊಂದಿಗೆ ಅಂದಾಜು 2.5 ಸಾವಿರ ಅರ್ಜಿಗಳನ್ನು ಆಕಾಂಕ್ಷಿಗಳು ಸಲ್ಲಿಸಿದ್ದಾರೆ.
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದು ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಜೂನ್‌ನಲ್ಲೇ ನಿಗಮ-ಮಂಡಳಿಗಳ ನಿರ್ದೇಶಕರು ಮತ್ತು ಸದಸ್ಯರ ಆಯ್ಕೆಗಾಗಿ ಡಾ| ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಇದಾಗಿ ಕೆಲವು ದಿನಗಳ ಅನಂತರ ಸಮಿತಿಯನ್ನು ಪರಿಷ್ಕರಿಸಲಾಗಿತ್ತು.