ಮಂಗಳೂರು: ಭಾರತೀಯ ಜನತಾ ಪಕ್ಷ ದ.ಕ. ಲೋಕಸಭಾ ಕ್ಷೇತ್ರದ ನಿಮ್ಮ ಸಲಹೆ- ನಮ್ಮ ಸಂಕಲ್ಪ ಅಭಿಯಾನದ “ಸಂಕಲ್ಪ ಪತ್ರ’ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚುನಾವಣ ಪ್ರಣಾಳಿಕೆ ದ.ಕ. ಜಿಲ್ಲಾ ಸಂಚಾಲಕ ಶಾಂತಾರಾಮ ಶೆಟ್ಟಿ ಅವರು, ದೇಶದಲ್ಲಿ ಕನಿಷ್ಠ ಒಂದು ಕೋಟಿ ಮಂದಿಯ ಸಲಹೆ ಪಡೆಯಲು ಉದ್ದೇಶಿಸಲಾಗಿದ್ದು, ಅದೇ ರೀತಿ ದ.ಕ. ಲೋಕಸಭಾ ಕ್ಷೇತ್ರದಿಂದ 50 ಸಾವಿರ ಮಂದಿಯ ಸಲಹೆ ಪಡೆಯುವ ನಿಟ್ಟಿನಲ್ಲಿ ಸಂಕಲ್ಪ ಪತ್ರ ಬಿಡುಗಡೆ ಮಾಡಲಾಗಿದೆ. ಕಳೆದ 10 ವರ್ಷಗಳ ಬಿಜೆಪಿ ಆಡಳಿತ ಅವಧಿಯಲ್ಲಿ ಶೇ.95ರಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ಹೇಳಿದ ಮಾತನ್ನು ಪೂರ್ಣಗೊಳಿಸಿದೆ. ಮುಖ್ಯವಾಗಿ ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಕ್ ರದ್ದು, ಕಾಶ್ಮೀರ 370ನೇ ವಿಧಿ ರದ್ದು ಮೊದಲಾದ ವಿಚಾರಗಳನ್ನು ಜಾರಿಗೆ ತರಲಾಗಿದೆ.
ಮುಂದಿನ ಒಂದು ತಿಂಗಳ ಕಾಲ ಜಿಲ್ಲೆಯ ಶಾಲೆ, ಕಾಲೇಜು, ದೇವಸ್ಥಾನ, ಮಾಲ್‌ಗಳಲ್ಲಿ ಸಂಕಲ್ಪ ಪತ್ರವನ್ನು ಹಾಕುವ ಬಾಕ್ಸ್ ಇರಿಸಲಾಗುವುದು. ಸಾರ್ವಜನಿಕರು ಪತ್ರವನ್ನು ಭರ್ತಿ ಮಾಡಿ ಬಾಕ್ಸ್‌ಗೆ ಹಾಕಬಹುದು. ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಬಿಜೆಪಿ ರಾಷ್ಟ್ರೀಯ ಕಚೇರಿಗೆ ಕಳುಹಿಸಿ, ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಸಾರ್ವಜನಿಕರು ತಮ್ಮ ಬೇಡಿಕೆಗಳು ಸೇರಿದಂತೆ ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಉದ್ದಿಮೆ, ರಸ್ತೆ, ಮೂಲ ಸೌಕರ್ಯ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಬಹುದಾಗಿದೆ. ನಮೋ ಆ್ಯಪ್ ಮೂಲಕ ಅಥವಾ 9090902024 ಮೊಬೈಲ್ ಸಂಖ್ಯೆಗೆ ಮಿಸ್‌ಕಾಲ್ ನೀಡುವ ಮೂಲಕವೂ ಸಲಹೆ ನೀಡಬಹುದು ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದ.ಕ. ಚುನಾವಣ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ್ ಪ್ರಭು ಉಪಸ್ಥಿತರಿದ್ದರು.