Advertisement

ಇಲೆಕ್ಷನ್‌ ಬಂದೇ ಬಂತು!

06:00 AM Apr 13, 2018 | Team Udayavani |

ಶ್ರಮಪಟ್ಟು ಈ ಬಾರಿ ಗದ್ದುಗೆ ಏರಿಯೇ ಏರುವೆವು ಎಂಬ ಉತ್ಸಾಹದಲ್ಲಿ ಕೆಲವರಿದ್ದಾರೆ. ಉಳಿದವರು ಯಾರು ಈ ಸಲ ಗೆದ್ದು ಗದ್ದುಗೆ ಹಿಡಿಯುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಈಗಷ್ಟೇ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ ಪಡೆದಿರುವ ವಿದ್ಯಾರ್ಥಿಗಳಾದ ನಾವು ಈ ಚುನಾವಣಾ ಸಂಘರ್ಷ ಏನು ಫ‌ಲಿತಾಂಶ ನೀಡುತ್ತದೆ ಎಂದು ಕಾಯುತ್ತ ಇದ್ದೇವೆ. ಕೇಂದ್ರದ ನಾಯಕರುಗಳು ಆಗಾಗ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಕೆಲವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪೊಳ್ಳು ಪ್ರಣಾಳಿಕೆಗಳನ್ನು ತೆರೆದಿಡುತ್ತಿದ್ದಾರೆ. ಎಲ್ಲರೂ ನಮಗೇ ಓಟು ಕೊಡಿ ಎಂದು ಕೇಳುವಾಗ ಮತದಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾನೆ. ವಿದ್ಯಾರ್ಥಿಗಳಾದ ನಾವು ಕೂಡಾ ಈ ಸಲ ಯಾರಿಗೆ ಓಟು ಹಾಕಿದರೆ ಒಳ್ಳೆಯದು ಎಂಬ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದೇವೆ.

Advertisement

ಇದ್ದಕ್ಕಿದ್ದಂತೆಯೇ ಕೆಲವು ಮರಿನಾಯಕರಿಗೆ ಅವಕಾಶ ದೊರೆತು ಅವರು ತಮ್ಮ ನಾಯಕನನ್ನು ಮುಂದಿರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಇದು ಯುವಜನತೆ ನಾಯಕತ್ವದ ಗುಣ ಪಡೆದುಕೊಳ್ಳಲು ಪ್ರೇರಣೆ ನೀಡುತ್ತದೆ.

ಪಕ್ಷ ಯಾವುದೇ ಅಧಿಕಾರದಲ್ಲಿರಲಿ, ಓಟು ಸಮೀಪ ಬಂದಕೂಡಲೇ ಅಭಿವೃದ್ಧಿಯ ಮಾತು ಆರಂಭವಾಗುತ್ತದೆ. ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವ ಕೆಲಸ ಶುರುವಾಗುತ್ತದೆ. ಕಿತ್ತುಹೋದ ರಸ್ತೆಗಳಿಗೆ ಡಾಂಬರು ಭಾಗ್ಯ ಲಭ್ಯವಾಗುತ್ತದೆ. ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಅಧಿಕವಾಗುತ್ತದೆ. ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮೊದಲಾಗುತ್ತಾರೆ. ತರಾತುರಿಯಲ್ಲಿ ನಡೆಯುವ ಇಂಥ ಕೆಲಸಗಳಲ್ಲಿ ಕೆಲವು ಪ್ರಯೋಜನಕಾರಿಯಾಗಿರುತ್ತವೆ. ಇನ್ನು ಕೆಲವು ನಿಷ್ಪ್ರಯೋಜನಕವಾಗಿರುತ್ತವೆ. ಕೆಲವು ಶುರುವಾಗುವುದು ಮಾತ್ರ, ಮುಕ್ತಾಯದ ಮುಖ ಕಾಣುವುದೇ ಇಲ್ಲ. ವಿರೋಧ ಪಕ್ಷಗಳು ಆಡಳಿತಾರೂಢ ಸರಕಾರದ ಒಳ್ಳೆಯ ಮತ್ತು ಕೆಟ್ಟ- ಎಲ್ಲ ಕೆಲಸಗಳನ್ನು ಒಂದೇ ಸವನೆ ದೂರಲಾರಂಭಿಸುತ್ತವೆ. ಕೆಸರೆರಚಾಟ ಆರಂಭವಾಗುತ್ತದೆ. ಈ ಕೆಸರು ಮತದಾರರಾದ ನಮ್ಮ ಮೇಲೆಯೂ ಬಿದ್ದು ನಮ್ಮ ಉಡುಪುಗಳೂ ಕೊಳೆಯಾಗುತ್ತವೆ. ಈ ಸಂದರ್ಭದಲ್ಲಿ ಮತದಾರರು ತುಂಬ ಎಚ್ಚರದಲ್ಲಿರಬೇಕಾಗುತ್ತದೆ. ಎಲ್ಲ ವ್ಯಕ್ತಿಗಳ ಮಾತುಗಳು ಪ್ರಿಯವೆನಿಸುತ್ತವೆ. ಪಕ್ಷಗಳು ದುಡ್ಡು , ವಸ್ತುಗಳ ಆಮಿಷ ಒಡ್ಡಿ ಮತದಾರರನ್ನು ತಮ್ಮತ್ತ ಸೆಳೆಯುತ್ತವೆ. ಹೀಗೆ ಮಾಡುವುದು ತಪ್ಪು. ವಸ್ತುಗಳನ್ನು ಲಂಚರೂಪದಲ್ಲಿ ಹಂಚುವುದು ಹೇಗೆ ತಪ್ಪೊ , ಹಾಗೆಯೇ ಮತದಾರ ಅದನ್ನು ಸ್ವೀಕರಿಸುವುದು ಕೂಡಾ ಸಮಾಜದ್ರೋಹವೇ ಆಗಿದೆ. ಕೊಡುವುದು ತಪ್ಪೇ; ಸ್ವೀಕರಿಸುವುದು ಕೂಡಾ ತಪ್ಪೇ. ಈ ನಿಟ್ಟಿನಲ್ಲಿ ಯುವಮತದಾರರು ಹೆಚ್ಚು ಎಚ್ಚರದಿಂದ ಗಮನಿಸಬೇಕಾಗುತ್ತದೆ.

ನಮ್ಮ ದೇಶದಲ್ಲಿ ಶೇ. 80 ಮಂದಿ ಯುವ ಮತದಾರರಿದ್ದಾರೆ. ನಮ್ಮದು ಪ್ರಜಾಪ್ರಭುತ್ವದ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಅಂದರೆ, ಪ್ರಜೆಗಳು ತಾವು ಒಬ್ಬನನ್ನು ಆಯ್ಕೆ ಮಾಡಿ ತಮ್ಮ ಪ್ರಭುವನ್ನು ನಿರ್ಧರಿಸುತ್ತಾರೆ. ಆತ ಐದು ವರ್ಷ ಅಧಿಕಾರ ವಹಿಸುತ್ತಾನೆ. ರಾಜಪ್ರಭುತ್ವದ ಹಾಗೆ ಅಪ್ಪನಿಂದ ಮಗ ಅಧಿಕಾರ ಪಡೆಯಲೇಬೇಕೆಂಬ ನಿಬಂಧನೆ ಏನಿಲ್ಲ. ಯಾರೂ ಪ್ರಭುವಾಗಬಹುದು, ಆಗದಿರಲೂ ಬಹುದು. ಹೀಗೆ ಚುನಾವಣೆಯಲ್ಲಿ ಆಯ್ಕೆಗೊಂಡು ಅಧಿಕಾರ ಪಡೆಯಬೇಕಾದರೆ ಆತ ತನ್ನನ್ನು ಆರಿಸುವಂತೆ ಪ್ರಜೆಗಳನ್ನು ವಿನಂತಿಸುತ್ತಾನೆ. ಒಂದು ರೀತಿಯಲ್ಲಿ ಇಂಥ ಚುನಾವಣಾ ಪ್ರಚಾರವೇ ಅರ್ಥಹೀನ. ಒಳ್ಳೆಯ ಕೆಲಸ ಮಾಡಿದ್ದರೆ ತನ್ನನ್ನು ಆರಿಸುತ್ತಾರೆ, ಇಲ್ಲದಿದ್ದರೆ ಇಲ್ಲ ಎಂಬ ನಂಬಿಕೆಯಲ್ಲಿ ಸುಮ್ಮನಿರುವುದೇ ಸೂಕ್ತ.

ಇಂದಿನ ಯುವಜನರಂತೂ ಕಾಲೇಜು ಕಲಿತವರು. ಅವರಿಗೆ ಯೋಚನೆ ಮಾಡುವ ಶಕ್ತಿ ಇದೆ. ಅತಿಯಾಗಿ ಪ್ರಚಾರ ಮಾಡುವವನಿಗೆ ಮರುಳಾಗದೆ, ಒಳ್ಳೆಯ ಕೆಲಸ ಮಾಡಿದವನನ್ನು ಮಾತ್ರ ಆಯ್ಕೆ ಮಾಡುವ ವಿವೇಚನಾ ಶಕ್ತಿ ಅವರಿಗಿದೆ.

Advertisement

ಗಣೇಶ ಕುಮಾರ್‌ ಪತ್ರಿಕೋದ್ಯಮ ವಿಭಾಗ ವಿ. ವಿ. ಕಾಲೇಜು, ಮಂಗಳೂರು

ಮತದಾನ ಎನ್ನುವುದು ಅಮೂಲ್ಯವಾದದ್ದು. ಮತದಾನ ಮಾಡುವ ಮೊದಲು ಯೋಚಿಸಬೇಕು. ಅದರ ಪ್ರಾಮುಖ್ಯತೆ ಏನು? ಮೊದಲಾದವುಗಳನ್ನು ತಿಳಿದುಕೊಂಡರೆ ಮತದಾನ ಅರ್ಥಪೂರ್ಣವೆನಿಸುತ್ತದೆ.

ಮತದಾನ ಅನ್ನುವುದು ಅಖಂಡ ಪ್ರಜಾ ಸಮೂಹದ ದನಿಯಾಗಿದೆ. ಪ್ರತಿ ಪ್ರಜೆಗೂ ತನಗೆ ಬೇಕಾದ ನಾಯಕನನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯಾದ್ದರಿಂದ ಇದೊಂದು ಪ್ರಜೆಗಳ ಪ್ರಮುಖ ಹಕ್ಕು ಕೂಡ ಆಗಿದೆ. ಪ್ರಜೆಗಳ ಒಳಿತು ಬಯಸುವ ಜನಪರ ನಾಯಕರನ್ನು ಆರಿಸಲು ಮತ ಎಂಬ ಪ್ರಕ್ರಿಯೆ ಬೇಕು. ಮತದಾನದ ಬಗ್ಗೆ ಅರಿವು ಮೂಡಿಸಲು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ನಮ್ಮ ದೇಶದಲ್ಲಿ ಜನವರಿ 25ನ್ನು ಮತದಾನ ದಿನ ಎಂದು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಬರುವ ಮೊದಲು ದೇಶದಲ್ಲಿ ಮತದಾನ ಮಾಡುವ ಹಕ್ಕನ್ನು ಪ್ರಜೆಗಳು ಪಡೆದಿರಲಿಲ್ಲ ಹಾಗೂ ಆವಾಗ ಮತದಾನ ಎನ್ನುವ ಪ್ರಕ್ರಿಯೆಯೂ ಇರಲಿಲ್ಲ. ರಾಜರು ವಂಶಪರಂಪರೆಯಾಗಿ ನಮ್ಮ ದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದರು. ಬ್ರಿಟಿಷರಿಗೂ ಕೂಡ ಈ ವ್ಯವಸ್ಥೆಯನ್ನು ಸರಿಮಾಡಲು ಸಾಧ್ಯವಾಗಲಿಲ್ಲ. ಯಾವಾಗ ನಮ್ಮ ದೇಶ ತನ್ನದೇ ಆದ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದಿತೋ ಆಗ ನಿಜವಾದ ಸ್ವಾತಂತ್ರ್ಯ ಪಡೆದ ಜನತಂತ್ರ ವ್ಯವಸ್ಥೆಯಿಂದಾಗಿ ಪ್ರತಿಪ್ರಜೆಗಳ ನಿರ್ಣಯಕ್ಕೆ ಗೌರವ ಸಿಕ್ಕಿ ಮತದಾನದ ಅವಕಾಶವನ್ನು ಪಡೆದುಕೊಂಡೆವು. 1950ರಂದು ನಮ್ಮ ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ಮಾಡಿ ಅದೇ ವರ್ಷ ಜನವರಿ 25ರಂದು ಚುನಾವಣಾ ಆಯೋಗವನ್ನು ರಚಿಸಲಾಯಿತು. ಇದೀಗ ನಾವು 8ನೇ ವರ್ಷದ ಮತದಾನದ ದಿನವನ್ನು ಆಚರಿಸುತ್ತಿದ್ದೇವೆ.

18 ವರ್ಷ ಮೇಲ್ಪಟ್ಟ ಎಲ್ಲಾ ಪ್ರಜೆಗಳಿಗೂ ಕೂಡ ಚುನಾವಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಹಕ್ಕಿದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ನಗರ ಪ್ರದೇಶದಲ್ಲಿ ವಾಸಿಸುವ ವಿದ್ಯಾವಂತರು ಮತವನ್ನು ಹಾಕದೆ ನಿರ್ಲಕ್ಷ್ಯವಾಗಿ ಕಡೆಗಣಿಸುತ್ತಿದ್ದಾರೆ. ಯಾಕೆಂದರೆ, ಮತ ಹಾಕುವಾಗ ಅವರು ನಾಯಕರನ್ನು ನೋಡುತ್ತಾರೆ. ನ್ಯಾಯದ ಪರ ಇರುವ, ಜನಪರ ಕೆಲಸಗಳನ್ನು ಮಾಡುವ ನಾಯಕರನ್ನು ಆಯ್ಕೆಮಾಡುವುದು ಪ್ರಜೆಗಳಾದ ನಮ್ಮ ಕರ್ತವ್ಯವಾಗಿದೆ. ಹಾಗೆಯೇ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಹಾಗೂ ದಕ್ಷರಲ್ಲದ ನಾಯಕರನ್ನು ಬದಲಾಯಿಸುವ, ಯಾರು ಸರಿಯಾದ ಆಡಳಿತವನ್ನು ಮಾಡುವುದಿಲ್ಲವೋ ಅವರನ್ನು ಬದಲಾಯಿಸುವ ಶ‌ಕ್ತಿಯೂ ನಮ್ಮ ಕೈಯಲ್ಲಿದೆ. ಹಾಗಾಗಿ ಮತ ಚಲಾಯಿಸುವಾಗ ಯಾವುದೇ ರಾಜಕೀಯ ಆಮಿಷಗಳಿಗೆ ಬಲಿಯಾಗದೆ ಸ್ವಇಚ್ಛೆಯಿಂದ ಮತವನ್ನು ಹಾಕಬೇಕು. ಅದರಲ್ಲೂ ಯುವಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು ಅಗತ್ಯದ ಕೆಲಸವಾಗಿದೆ.

ಇನ್ನು ಕೆಲವೇ ಸಮಯದಲ್ಲಿ ನಮ್ಮ ರಾಜ್ಯ ಹಾಗೂ ಕೇಂದ್ರದಲ್ಲಿ ಚುನಾವಣೆ ನಡೆಯಲಿದೆ. ಎಲ್ಲ ಪ್ರಜೆಗಳೂ ಮತದಾನದಲ್ಲಿ ಭಾಗವಹಿಸಿ ತಮಗೆ ಬೇಕಾದ ಜನಪರ ನಾಯಕರನ್ನು ಪ್ರಜ್ಞೆಯಿಟ್ಟು ಆಯ್ಕೆ ಮಾಡಬೇಕು. ಇಂತಹ ಒಂದು ದೊಡ್ಡ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ.

ಮಲ್ಲಿಕಾ ಜೆ. ಬಿ. ತೃತೀಯ ಬಿ. ಎ., ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next