Advertisement

Election ಅಕ್ರಮ: ಭಾರೀ ಪ್ರಮಾಣದ ನಗದು, ಮದ್ಯ ವಶ

11:47 PM Mar 22, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ನೀತಿಸಂಹಿತೆ ಜಾರಿ ತಂಡಗಳು ರಾಜ್ಯದ ಹಲವೆಡೆ ಶುಕ್ರವಾರ ಭಾರೀ ಪ್ರಮಾಣದ ನಗದು, ಚಿನ್ನಾಭರಣ, ಮದ್ಯ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿವೆ.

Advertisement

ಈ ಪೈಕಿ ರಾಮನಗರ ಜಿಲ್ಲೆಯ ಹೆಜ್ಜಾಲ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದ 5.50 ಕೋ. ರೂ.ಅನ್ನು ವಶಪಡಿಸಿಕೊಂಡಿರುವುದು ವಿಶೇಷ. ಇದಲ್ಲದೆ, ಬೆಂಗಳೂರು ಗ್ರಾ.ಜಿಲ್ಲೆ ಯೊಂದರಲ್ಲೇ ಒಟ್ಟು 7 ಕೋಟಿ 86 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಿಲ್ಲೆ ಯಲ್ಲಿ ಸುಮಾರು 21 ಚೆಕ್‌ಪೋಸ್ಟ್‌ ಗಳನ್ನು ಚುನಾವಣಾಧಿಕಾರಿಗಳು ತೆರೆದಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ನೆಲಮಂಗಲ, ದೇವನಹಳ್ಳಿಯ ವಿವಿಧೆಡೆ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಲಿಕ್ಕರ್‌ ವಶಕ್ಕೆ ಪಡೆದಿದ್ದಾರೆ. ರಾಯಚೂರು, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೇ ದಿನ ಒಟ್ಟು 25 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಪಡಿಸಿಕೊಳ್ಳಲಾಗಿದೆ.

ಧಾರವಾಡ ಸಮೀಪದ ತೇಗೂರ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ಸಾರಿಗೆ ಬಸ್‌ ತಪಾಸಣೆ ವೇಳೆ ದಾಖಲೆ ಇಲ್ಲದ 38.50 ಲಕ್ಷ ಮೌಲ್ಯದ 778 ಗ್ರಾಂ ತೂಕದ ಗೋರಮಾಳ ಸರ, ಗುಂಡುಗಳು, ಲಾಕೆಟ್‌ ಇರುವ ಬಂಗಾರದ ಆಭರಣಗಳು ಪತ್ತೆಯಾಗಿವೆ. ರಾಯಚೂರು ತಾಲೂಕಿನ ಸಿಂಗನೋಡಿ ಬಳಿಯ ಗಡಿಭಾಗದ ಚೆಕ್‌ ಪೋಸ್ಟ್‌ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ. ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ – ಚೆಕ್‌ ಪೋಸ್ಟನಲ್ಲಿ ದಾಖಲೆ ಇಲ್ಲದ 14 ಲಕ್ಷ ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿ ರೈಲು ನಿಲ್ದಾಣದ ರೈಲ್ವೆ ಪಾರ್ಸೆಲ್‌ ಕಚೇರಿಯಲ್ಲಿ ಸೂಕ್ತ ದಾಖಲೆಗಳಿಲ್ಲದ 8 ಲಕ್ಷ ರೂ. ಮೌಲ್ಯದ 480 ಮಿಕ್ಸರ್‌ ಗ್ರೈಂಡರ್ ಗಳನ್ನು ವಾಣಿಜ್ಯ ತೆರಿಗೆ ಹಾಗೂ ಫ್ಲೈಯಿಂಗ್‌ ಸ್ಕ್ವಾಡ್‌(ಎಫ್‌ಎಸ್‌ಟಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ 6 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಒಟ್ಟು 7 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ವಾರದಲ್ಲಿ 36.41 ಕೋಟಿ ರೂ. ಮೌಲ್ಯದ ಅಕ್ರಮ ಜಫ್ತಿ
ಬೆಂಗಳೂರು: ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆ ಸಹಿತ 5.22 ಕೋಟಿಗೂ ಅಧಿಕ ಮೌಲ್ಯದ ಚುನಾವಣ ಅಕ್ರಮ ಸೊತ್ತನ್ನು ಜಪ್ತಿ ಮಾಡಿದೆ. ತನ್ಮೂಲಕ ನೀತಿ ಸಂಹಿತೆ ಜಾರಿಯಾಗಿ ಒಂದೇ ವಾರದಲ್ಲಿ 36.41 ಕೋಟಿ ರೂ ಮೌಲ್ಯದ ಅಕ್ರಮ ಜಫ್ತಿ ಮಾಡಲಾಗಿದೆ.

Advertisement

ಕಳೆದ 24 ಗಂಟೆಗಳ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸರು 1.36 ಕೋ. ರೂ., ಆದಾಯ ತೆರಿಗೆ ತಂಡಗಳು 1.39 ಕೋ. ರೂ. ಸಹಿತ ಒಟ್ಟು 2.75 ಕೋಟಿ ರೂ ಅಕ್ರಮ ಜಫ್ತಿ ಮಾಡಿವೆ. 10.39 ಲಕ್ಷದ ಉಚಿತ ಉಡುಗೊರೆಗಳು, 46.04 ಲಕ್ಷ ಮೌಲ್ಯದ ಇತರ, 57.94 ಲಕ್ಷ ಮೌಲ್ಯದ ಮದ್ಯ, ಪೊಲೀಸರು 51.70 ಲಕ್ಷ ಮೌಲ್ಯದ ಚಿನ್ನ, ಆದಾಯ ತೆರಿಗೆ ಇಲಾಖೆಯಿಂದ 71.16 ಲಕ್ಷ ಮೌಲ್ಯದ ಚಿನ್ನ, 9 ಲಕ್ಷ ಮೌಲ್ಯದ ವಜ್ರವನ್ನು ಜಪ್ತಿ ಮಾಡಿದೆ.
ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಈವರೆಗೆ 9.64 ಕೋ. ರೂ. ನಗದು, 15.67 ಲಕ್ಷ ಮೌಲ್ಯದ ಉಚಿತ ಉಡುಗೊರೆ, 1.63 ಕೋಟಿ ರೂ ಇತರ, 22.85 ಕೋಟಿ ರೂ. ಮೌಲ್ಯದ 7.20 ಲಕ್ಷ ಲೀಟರ್‌ ಮದ್ಯ, 53.37 ಲಕ್ಷ ರೂ. ಮೌಲ್ಯದ 52.12 ಕೆಜಿ ಮಾದಕ ವಸ್ತುಗಳು, 1.27 ಕೋಟಿ ಮೌಲ್ಯದ 2.08 ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next