Advertisement

ಚುನಾವಣೆ ಪರಿಣಾಮ: ಖಾಸಗಿ ಬಸ್‌ ಯಾನ ಬಲು ದುಬಾರಿ

12:38 AM Apr 25, 2023 | Team Udayavani |

ಮಂಗಳೂರು: ಮತದಾನ ಮಾಡಲೆಂದು ಊರಿಗೆ ತೆರಳಲು ಮನ ಮಾಡಿರುವ ದೂರದ ಊರಿನಲ್ಲಿರುವ ಮಂದಿಗೆ ಆಘಾತಕಾರಿ ಸುದ್ದಿಯೊಂದು ಕಾದಿದೆ. ಖಾಸಗಿ ಬಸ್‌ಗಳು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದು, ಪ್ರಯಾಣ ದರವನ್ನು ಮೂರುಪಟ್ಟು ಏರಿಕೆ ಮಾಡಿವೆ. ಸಾಮಾನ್ಯ ಪ್ರಯಾಣಿಕರು ಮತ ಚಲಾಯಿಸಲು ಹೆಚ್ಚಿನ ದರ ನೀಡಿ ತಮ್ಮ ಊರಿಗೆ ಬರುವ ಅನಿವಾರ್ಯ ಎದುರಾಗಿದೆ.

Advertisement

ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ಪ್ರದೇಶದಲ್ಲಿರುವ ಮಂದಿ ಸಾಮಾನ್ಯವಾಗಿ ಚುನಾವಣೆಗೆಂದು ತಮ್ಮ ತಮ್ಮ ಊರಿಗೆ ಬರುತ್ತಾರೆ. ಅದರಲ್ಲಿಯೂ ಈ ಬಾರಿ ಚುನಾವಣೆ ದಿನದಿಂದ ಎರಡು ದಿನದಲ್ಲೇ ಎರಡನೇ ಶನಿವಾರ ಬಳಿಕ ರವಿವಾರ ರಜಾ ಇರುವ ಕಾರಣ ಈಗಾಗಲೇ ಯೋಜನೆಯನ್ನೂ ರೂಪಿಸಿರುತ್ತಾರೆ. ಇದನ್ನೇ ಬಂಡವಾಳವಾಗಿರಿಸಿಕೊಂಡ ಕೆಲ ಖಾಸಗಿ ಬಸ್‌ ಮಾಲಕರು ತಮ್ಮ ಬಸ್‌ ಟಿಕೆಟ್‌ ದರವನ್ನು ಏಕಾಏಕಿ ಏರಿಕೆ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ.

ಹಬ್ಬಗಳ ಸಮಯ, ಚುನಾವಣೆ ವೇಳೆ ಖಾಸಗಿ ಬಸ್‌ ಯಾನ ದರ ಏರಿಕೆ ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಿಂದ ಇದೇ ರೀತಿ ವಿಶೇಷ ದಿನಗಳಲ್ಲಿ ಬಸ್‌ ಟಿಕೆಟ್‌ ದರ ದುಪ್ಪಟ್ಟು ಏರಿಕೆ ಮಾಡಲಾಗುತ್ತಿದೆ. ಸಾರಿಗೆ ಸಚಿವರು, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆಯಿಂದ ಹಲವು ಬಾರಿ ಕಠಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದರೂ ಕೆಲವೊಂದು ಬಾರಿ ಪ್ರಕರಣ ದಾಖಲು ಮಾಡಿದರೂ ದರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಕೆಎಸ್ಸಾರ್ಟಿಸಿ ದರ ಸದ್ಯಕ್ಕೆ ಯಥಾಸ್ಥಿತಿ
ದೂರದ ಊರುಗಳಿಗೆ ಪ್ರಯಾಣಿಸುವ ಕೆಎಸ್ಸಾರ್ಟಿಸಿ ಯಾನ ದರ ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ದೂರದ ಊರುಗಳಿಗೆ ಸಂಚರಿಸುವ ಸರಕಾರಿ ಬಸ್‌ಗಳಲ್ಲಿ ಸದ್ಯ ದರ ಹೆಚ್ಚಳವಾಗಲಿಲ್ಲ. ಸರಕಾರಿ ಬಸ್‌ಗಳಲ್ಲಿ ವಿಶೇಷ ದಿನಗಳ ದರ ಮತ್ತು ಸಾಮಾನ್ಯ ದಿನಗಳ ದರ ಎಂಬ ಎರಡು ದರಪಟ್ಟಿ ಇರುತ್ತದೆ.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಚುನಾವಣೆ ಸಮಯದಲ್ಲಿ ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌ ಕಾರ್ಯಾಚರಿಸುತ್ತದೆ. ಆ ಮಾಹಿತಿ ಸದ್ಯದಲ್ಲೇ ನೀಡಲಾಗುತ್ತದೆ. ಕೆಎಸ್ಸಾರ್ಟಿಸಿ ಯಾನಕ್ಕೆ ಸದ್ಯಟಿಕೆಟ್‌ ದರ ಹೆಚ್ಚಳ ಮಾಡಲಾಗಿಲ್ಲ. ಕಾರ್ಯಾಚರಿಸುವ ವಿಶೇಷ ಬಸ್‌ಗಳಲ್ಲಿ ಟಿಕೆಟ್‌ಗೆ ಶೇ. 10ರಷ್ಟು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ದರ ಮತ್ತಷ್ಟು ಹೆಚ್ಚಳ ಸಾಧ್ಯತೆ
ಚುನಾವಣೆಗೆಂದು ತಮ್ಮ ತಮ್ಮ ಊರುಗಳಿಗೆ ಬರಲು ಕೆಲವು ಮಂದಿ ಇದೀಗಷ್ಟೇ ಪ್ರಯಾಣಿಕರು ಬಸ್‌ಗಳಲ್ಲಿ ಸೀಟು ಬುಕ್‌ ಮಾಡುತ್ತಿದ್ದಾರೆ. ಸೀಟು ಭರ್ತಿಯಾದಂತೆ ಹೆಚ್ಚಿನ ಬಸ್‌ ಕಾರ್ಯಾಚರಣೆ ನಡೆಸುವ ಜತೆಗೆ ಪ್ರಯಾಣ ದರ ಕೂಡ ಹೆಚ್ಚಳವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 700 ರೂ.ನಿಂದ 800 ರೂ. ಇರುವ ಖಾಸಗಿ ಸೀಟರ್‌ ಬಸ್‌ ಟಿಕೆಟ್‌ ದರ ಚುನಾವಣೆಯ ಸಮಯದಲ್ಲಿ 2000 ರೂ.ಗೂ ಹೆಚ್ಚಿನ ದರಕ್ಕೆ ಏರಿಕೆಯಾಗಿದೆ.

Advertisement

ದೂರದೂರಿಗೆ ತೆರಳುವ ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ದರ ಏರಿಕೆಯಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ದೂರು ನೀಡಿಲ್ಲ. ಈ ಕುರಿತು ಸಾರಿಗೆ ಇಲಾಖೆಗೆ ಯಾರಾದರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಜಾನ್‌ ಮಿಸ್ಕಿತ್‌, ಮಂಗಳೂರು ಆರ್‌ಟಿಒ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next