Advertisement

Election; ಹೆಗ್ಡೆ vs ಕೋಟ: ಮೂರನೇ ಬಾರಿ ಎದುರಾಳಿಗಳು

10:08 PM Mar 21, 2024 | Team Udayavani |

ಉಡುಪಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದು ಈ ಚುನಾವಣೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಹೆಗ್ಡೆ ಅವರ ನಡುವಿನ ಮೂರನೇ ಚುನಾವಣ ಸಮರಕ್ಕೆ ಸಾಕ್ಷಿಯಾಗಲಿದೆ.

Advertisement

ಕ್ಷೇತ್ರ ಮರುವಿಂಗಡಣೆ ವೇಳೆ ಹಂಚಿ ಹೋಗಿದ್ದ ಹಿಂದಿನ ಬ್ರಹ್ಮಾವರ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಜಯಪ್ರಕಾಶ್ ಹೆಗ್ಡೆ ಅವರು ಎರಡು ಬಾರಿ ಪರಸ್ಪರ ಎದುರಾಳಿಗಳಾಗಿದ್ದರು. 1999 ಮತ್ತು 2004 ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದರು. ಎರಡೂ ಬಾರಿ ಕೋಟ ಶ್ರೀನಿವಾಸ್ ಪೂಜಾರಿ ಸ್ಪರ್ಧೆ ನೀಡಿದ್ದರಾದರೂ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು. 2004 ರಲ್ಲಿ ಈಗ ಬಿಜೆಪಿಯಲ್ಲಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಎರಡನೇ ಸ್ಥಾನ ಪಡೆದಿದ್ದರು. ಕ್ಷೇತ್ರ ಅಂದು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿತ್ತು. 1999 ರಲ್ಲಿ ಹೆಗ್ಡೆ ಅವರು 32429 ಮತಗಳನ್ನು ಪಡೆದು ಜಯಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸರಳಾ ಬಿ ಕಾಂಚನ್ 27666 ಮತ, ಕೋಟ ಶ್ರೀನಿವಾಸ್ ಪೂಜಾರಿ 24043 ಮತಗಳನ್ನು ಪಡೆದಿದ್ದರು.

2004 ರಲ್ಲಿ ಹೆಗ್ಡೆ ಅವರು 39521ಮತಗಳನ್ನು ಪಡೆದು ಜಯಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 27348 ಮತ, ಕೋಟ ಶ್ರೀನಿವಾಸ್ ಪೂಜಾರಿ 25590 ಮತಗಳನ್ನು ಪಡೆದು ಸ್ಪರ್ಧೆ ನೀಡಿದ್ದರು.

ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ 20 ವರ್ಷಗಳ ಬಳಿಕ ಲೋಕಸಮರದಲ್ಲಿ ಮತ್ತೆ ಕರಾವಳಿಯ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ರಾಜಕಾರಣಿಗಳಿಬ್ಬರು ಹೋರಾಟಕ್ಕೆ ಅಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next