Advertisement

ಅಭ್ಯರ್ಥಿಗಳ ಚುನಾವಣಾ ಖರ್ಚು ಕೆಲ ಲಕ್ಷ ಮಾತ್ರ!

06:05 AM Jul 17, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಗೆಲ್ಲಬೇಕಾದರೆ ಕೋಟಿ ಕೋಟಿ ರೂ.ವೆಚ್ಚ ಮಾಡಬೇಕು ಎಂಬುದು ತಿಳಿದ ಸಂಗತಿ. ಇತ್ತೀಚಿಗಂತೂ ಯಾರು ಹೆಚ್ಚುವೆಚ್ಚ ಮಾಡುತ್ತಾರೋ ಅವರೇ ಗೆಲ್ಲುತ್ತಾರೆ. ಆದರೆ, ಇವೆಲ್ಲವೂ ಅನಧಿಕೃತ.

Advertisement

ಅಧಿಕೃತವಾಗಿ ವೆಚ್ಚ ಮಾಡುವುದು ಕೆಲವೇ ಲಕ್ಷ ಮಾತ್ರ. ಇತ್ತೀಚೆಗೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲ ವೆಚ್ಚ ಮಾಡಿದ್ದು ಕೆಲವೇ ಲಕ್ಷ ಮಾತ್ರ ಎಂಬ ಮಾಹಿತಿ ಉದಯವಾಣಿಗೆ ದೊರಕಿದೆ. ಅದರಲ್ಲೂ ಅತಿ ಹೆಚ್ಚು ವೆಚ್ಚ ಮಾಡಿರುವುದು ಮಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಶಾಸಕ ಜೆ.ಆರ್‌. ಲೋಬೋ. ಅವರ ಒಟ್ಟಾರೆ ಚುನಾವಣಾ ವೆಚ್ಚ 27.27 ಲಕ್ಷ ರೂ. ಮಾತ್ರ. ಅತಿ ಕಡಿಮೆ ವೆಚ್ಚ ಮಾಡಿರುವುದು ಶಿರಹಟ್ಟಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ರತ್ನಾಕರ ಏಣಿ. ಅವರ ವೆಚ್ಚ ಕೇವಲ 500 ರೂ. ಆಯೋಗ ಒಬ್ಬ ಅಭ್ಯರ್ಥಿಗೆ ನಿಗದಿಪಡಿಸಿರುವ ಗರಿಷ್ಠ ಚುನಾವಣಾ ವೆಚ್ಚ 28 ಲಕ್ಷ ರೂ. ಮಾತ್ರ.

ಇದರ ಗಡಿಯಲ್ಲೇ ಹೊಂದಾಣಿಕೆ ಮಾಡಿ ಲೆಕ್ಕ ತೋರಿಸಬೇಕು. 220 ಕ್ಷೇತ್ರಗಳ ಅಭ್ಯರ್ಥಿಗಳ ಲೆಕ್ಕ: 224 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಕ್ಷೇತ್ರಗಳ ಅಭ್ಯರ್ಥಿಗಳು ಮಾಡಿರುವ ವೆಚ್ಚ ಲಭ್ಯವಾಗಿದ್ದು, ಚುನಾವಣೆಗೆ ಸ್ಪರ್ಧಿಸಿದ್ದ 145 ಆಭ್ಯರ್ಥಿಗಳು 15ರಿಂದ 20 ಲಕ್ಷದವರೆಗೆ ಖರ್ಚು ಮಾಡಿರುವ ವಿವರ ಕೊಟ್ಟಿದ್ದರೆ, 24 ಅಭ್ಯರ್ಥಿಗಳು 20ರಿಂದ 27 ಲಕ್ಷ ರೂ. ವರೆಗೆ ಖರ್ಚು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ, 82ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಗೆ ಖರ್ಚು ಮಾಡಿದ್ದು ಬರೀ 5ಸಾವಿರ ರೂ. ಮಾತ್ರ. ಉಳಿದ ಅಭ್ಯರ್ಥಿಗಳು 10 ಸಾವಿರದಿಂದ 14 ಲಕ್ಷದವರೆಗೆ ಖರ್ಚಿನ ವಿವರ ನೀಡಿದ್ದಾರೆ.


ಘಟಾನುಘಟಿಗಳು ಖರ್ಚು ಮಾಡಿದ್ದು: ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದಲ್ಲಿ 9.51 ಲಕ್ಷ ರೂ. ಮತ್ತು ಚನ್ನಪ್ಪಟ್ಟಣದಲ್ಲಿ 10.22 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ 17.51 ಲಕ್ಷ ರೂ. ಮತ್ತು ಬದಾಮಿಯಲ್ಲಿ 19.60 ಲಕ್ಷ ರೂ., ಬಿ.ಶ್ರೀರಾಮುಲು ಬದಾಮಿಯಲ್ಲಿ 20 ಲಕ್ಷ ರೂ. ಮತ್ತು ಮೊಳಕಾಲ್ಮೂರಿನಲ್ಲಿ 19.12 ಲಕ್ಷ ರೂ. ಖರ್ಚು ತೋರಿಸಿದ್ದಾರೆ.

ಉಳಿದಂತೆ ಮಾಜಿ ಸಿಎಂ ಯಡಿಯೂರಪ್ಪ 18.14 ಲಕ್ಷ ರೂ., ಜಗದೀಶ್‌ ಶೆಟ್ಟರ್‌ 16.56 ಲಕ್ಷ ರೂ., ಕೆ.ಎಸ್‌.ಈಶ್ವರಪ್ಪ 17.80 ಲಕ್ಷ ರೂ., ಡಿ.ಕೆ. ಶಿವಕುಮಾರ್‌ 12.96 ಲಕ್ಷ ರೂ., ಎಚ್‌.ಡಿ.ರೇವಣ್ಣ 9.90 ಲಕ್ಷ ರೂ., ಡಾ.ಜಿ.ಪರಮೇಶ್ವರ್‌ 8.68 ಲಕ್ಷ ರೂ. ಖರ್ಚು ಮಾಡಿದ್ದಾರೆ.

Advertisement

82 ಅಭ್ಯರ್ಥಿಗಳು ಲೆಕ್ಕ ಕೊಟ್ಟಿಲ್ಲ: ಚುನಾವಣಾ ಆಯೋಗದ ಈಗಿನ ಮಾಹಿತಿ ಪ್ರಕಾರ ಒಟ್ಟು 82 ಅಭ್ಯರ್ಥಿಗಳು ಚುನಾವಣಾ ವೆಚ್ಚ ಸಲ್ಲಿಸಿಲ್ಲ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next