ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆ, ವಾಗ್ಯುದ್ಧವೇ ಅಖಾಡದಲ್ಲಿ ಮುನ್ನೆಲೆಗೆ ಬಂದಿವೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ, ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾವಲಂಬನೆಯನ್ನಾಗಿಸುವ ಚರ್ಚೆಗಳಿಗಿಂತ ಹೆಚ್ಚಾಗಿ ಅಭ್ಯರ್ಥಿಗಳ ತೇಜೋವಧೆ, ಭ್ರಷ್ಟಾಚಾರದ ಆರೋಪ, ಮತಬೇಟೆಯಲ್ಲಿ ಕಾಂಚಣ ಶಕ್ತಿಯ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ.
ತ್ರಿಕೋನ ಸ್ಪರ್ಧೆ: ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ನಡುವೆ ಕಣದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ.ವಿಜಯೇಂದ್ರ, ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅಖಾಡಕ್ಕೆ ಇಳಿದು ತಮ್ಮ ಪಕ್ಷಗಳ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ.
ದೂರು: ಚುನಾವಣಾ ಕಣದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಕುರಿತು ಯಾವುದೇ ಗಂಭೀರ ಚರ್ಚೆ ನಡೆಯುತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೊರಿಸಿರುವ ಗಂಭೀರ ಆರೋಪದ ಬಗ್ಗೆ ಅವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಮಂಜೇಗೌಡರ ವಿರುದ್ಧ ತಾವು ಮಾಡಿರುವ ಆರೋಪಕ್ಕೆ ಬದ್ಧನಿದ್ದೇನೆ. ಅಗತ್ಯ ಬಿದ್ದಾಗ ಅವರ ಅಕ್ರಮಗಳ ದಾಖಲೆಯನ್ನು ಹೊರ ಹಾಕುತ್ತೇನೆ ಎಂದು ಸಚಿವ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ವಾಗ್ಧಾಳಿ ನಡೆಸುತ್ತಿದ್ದಾರೆ.
ಎಚ್‌ಡಿಕೆ ಅನುಪಸ್ಥಿತಿ: ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಇನ್ನೂ ಈ ಕ್ಷೇತ್ರಕ್ಕೆ ಆಗಮಿಸಿಲ್ಲ. ಇಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ತಿಳಿದು ಮತ ನೀಡುವಂತೆ ಶಾಸಕ ಸಾ.ರಾ. ಮಹೇಶ್ ಪ್ರಚಾರ ನಡೆಸಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜೆಡಿಎಸ್‌ಗೆ ಮತ ನೀಡಬೇಕೆಂದು ಅವರು ಮತಯಾಚನೆ ಮಾಡುತ್ತಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪಕ್ಷದ ಅಭ್ಯರ್ಥಿ ಆರ್.ರಘು ಕೌಟಿಲ್ಯ ಅವರ ಪರ ಡಿ.5ರಂದು ಪ್ರಚಾರಕ್ಕೆ ಆಗಮಿಸಲಿದ್ದಾರೆ. ರಘು ಕೌಟಿಲ್ಯ ಅವರು ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ.
ಹೊಂದಾಣಿಕೆ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ದೋಸ್ತಿ ಮಾತುಕತೆ ನಡೆಯುತ್ತಿರುವ ಹೊತ್ತಲ್ಲಿ ಮೈಸೂರಿನ ಈ ಕ್ಷೇತ್ರದಲ್ಲಿ ಈ ಎರಡು ಪಕ್ಷಗಳ ನಾಯಕರ ಮಧ್ಯೆ ವಾಕ್ಸಮರ ತಾರಕ್ಕೇರಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಪರಸ್ಪರ ಎದುರಾಳಿಗಳು.
ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಾದರೂ ಈ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ನಾಯಕರು ಪ್ರಚಾರದಲ್ಲಿ ಒತ್ತಿ ಹೇಳುತ್ತಿದ್ದಾರೆ. ಚುನಾವಣಾ ಕಣದಲ್ಲಿ ಪ್ರಚಾರ ಬಿರುಸು ಪಡೆಯುತ್ತಿದ್ದಂತೆ ವಾಕ್ಸಮರವೂ ತಾರಕ್ಕೇರುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಾಗ ಎದುರಾಳಿಗಳ ವಿರುದ್ಧ ಟೀಕೆಗಳು ಮತ್ತಷ್ಟು ತೀವ್ರಗೊಳ್ಳುವುದು ನಿಶ್ಚಿತ.
ಬರೀ 165 ಮತಗಳಿಂದ ಸೋತಿದ್ದ ರಘು ಕೌಟಿಲ್ಯರನ್ನು ಗೆಲ್ಲಿಸಿ
ಕೊಳ್ಳೇಗಾಲ: ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 165 ಮತಗಳ ಅಂತರದಿಂದ ಸೋತಿದ್ದ ರಘು ಕೌಟಿಲ್ಯ ಅವರಿಗೆ ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅಭೂತಪೂರ್ವ ಗೆಲುವು ತಂದು ಕೊಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮನವಿ ಮಾಡಿದರು.
ಪಟ್ಟಣದ ನ್ಯಾಷನಲ್ ಶಾಲಾ ಮೈದಾನದಲ್ಲಿರುವ ಸಾವಿತ್ರ ಬಾಫುಲೆ ಮಂದಿರದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದು, ಕಾರ್ಯಕರ್ತರು ಈ ಬಗ್ಗೆ ಚಿಂತಿ ಸದೆ ಒಗ್ಗಟ್ಟಿನಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸಬೇಕು. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು.
ವಿರೋಧ ಪಕ್ಷದವರು ಎರಡು ಮತಗಳಿವೆ ಎಂದು ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಕಿವಿಗೊಡದೇ ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದರು. ಅಭ್ಯರ್ಥಿ ರಘು ಕೌಟಿಲ್ಯ ಮಾತನಾಡಿ, ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಬಲ ತುಂಬಬೇಕೆಂದರು.
ಸಭೆಯಲ್ಲಿ ಶಾಸಕ ಎನ್.ಮಹೇಶ್, ಬಿಜೆಪಿ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಂದರ್, ಮುಖಂಡರಾದ ಶಿವಕುಮಾರ್, ಸುಂದರ್, ರಾಮಚಂದ್ರ, ಡಾ|ದತ್ತೇಶ್‌ಕುಮಾರ್, ರಾಚಯ್ಯ, ನಾಗಶ್ರೀ, ಮಾಂಬಳ್ಳಿ ನಂಜುಂಡಸ್ವಾಮಿ ಇತರರಿದ್ದರು.