ವಿಜಯಪುರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ಪೋಸ್ಟ್ ಕರ್ತವ್ಯಕ್ಕೆ ಹಾಜರಾಗದೆ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಅಮಾನತಾಗಿದ್ದ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ವಿ.ಬಿ.ದಾನಮ್ಮನವರ ಸಸ್ಪೆಂಡ್ ಆದೇಶವನ್ನು ರದ್ದುಪಡಿಸಿದ್ದಾರೆ.
ಚುನಾವಣೆಯ ಕರ್ತವ್ಯದ ಭಾಗವಾಗಿ ಚೆಕ್‍ಪೋಸ್ಟ್ ಕರ್ತವ್ಯಕ್ಕೆ ನಿಯೋಜಿಸಿದ್ದ ಬರಟಗಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾದ್ಯಾಯ ಅಣ್ಣಪ್ಪ ಸೌದಿ, ಕಳ್ಳಕವಟಗಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಅಲ್ಲಾಭಕ್ಷ ಇವರು ಕರ್ತವ್ಯಕ್ಕೆ ಹಾಜರಾಗದೆ ಅನಧೀಕೃತ ಗೈರಾಗಿದ್ದರು.
ಮಾ.23 ರಂದು ಅಣ್ಣಪ್ಪ ಅವರು ಅರ್ಜುಣಗಿ ಚೆಕ್‍ಪೋಸ್ಟ್ ಗೆ, ಅಲ್ಲಾಭಕ್ಷ ಚಿಕ್ಕಗಲಗಲಿ ಚೆಕ್‍ಪೋಸ್ಟ್ ಕರ್ತವ್ಯಕ್ಕೂ ಹಾಜರಾಗಬೇಕಿತ್ತು. ಆದರೆ ಚುನಾವಣಾ ಕರ್ತವ್ಯಕ್ಕೂ ಹಾಜರಾಗದ ಕಾರಣ ಮಹತ್ವದ ಕರ್ತವ್ಯ ನಿರ್ವಹಣೆಯಲ್ಲಿ ಇಬ್ಬರೂ ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿದ್ದರು.
ಇದಕ್ಕಾಗಿ ಮಾ.28 ರಂದು ನೀಡಿದ್ದ ಕಾರಣ ಕೇಳಿ ನೋಟೀಸ್ ಗೂ ಉತ್ತರಿಸದ ಕಾರಣ ಇಬ್ಬರನ್ನೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಮಾ.31 ರಂದು ಸಸ್ಪೆಂಡ್ ಮಾಡಿ ಆದೇಶಿಸಿದ್ದರು.
ಇದೀಗ ಸಸ್ಪೆಂಡ್ ಆಗಿರುವ ಇಬ್ಬರೂ ಶಿಕ್ಷಕರು, ತಮ್ಮನ್ನು ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಧೀಕ್ಷಕ, ಕೋಠಡಿ ಮೇಲ್ವಿಚಾರಕರಾಗಿ ನಿಯುಕ್ತಿ ಮಾಡಿದೆ. ಹೀಗಾಗಿ ಚುನಾವಣಾ ಕರ್ತವ್ಯ ಸೇರಿದಂತೆ ತಾವು ವಹಿಸುವ ಯಾವುದೇ ಕರ್ತವ್ಯ ನಿರ್ವಹಿಸಲು ಸಿದ್ಧವೆಂದು, ಹೀಗಾಗಿ ತಮ್ಮ ವಿರುದ್ಧದ ಸಸ್ಪೆಂಡ್ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ವಿಜಯಪುರ ಡಿಡಿಪಿಐ ಅವರೂ ಎಸ್ಎಸ್ಎಲ್ ಸಿ ಪರೀಕ್ಷೆ ಕರ್ತವ್ಯ ನಿರ್ವಹಣೆಗಾಗಿ ಈ ಇಬ್ಬರ ಸೇವೆಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಇಬ್ಬರು ಶಿಕ್ಷರ ವಿರುದ್ಧದ ಇಲಾಖೆ ವಿಚಾರಣೆ ಬಾಕಿ ಇರಿಸಿ ಸಸ್ಪೆಂಡ್ ಆದೇಶವನ್ನು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಹಿಂಪಡೆದಿದ್ದಾರೆ.