Advertisement

ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕ ಘೋಷಣೆ

10:26 AM Oct 21, 2019 | Hari Prasad |

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಇವುಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಶಿವಮೊಗ್ಗ ಜಿಲ್ಲೆಯ ಜೋಗ್-ಕಾರ್ಗಲ್ ಪಟ್ಟಣ ಪಂಚಾಯತಿ ಮತ್ತು ಬಳ್ಳಾರಿಯ ಕಂಪ್ಲಿ ಪುರಸಭೆ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯತಿಯು ಸೇರಿದೆ. 2 ಮಹಾನಗರ ಪಾಲಿಕೆಗಳು, 6 ನರಸಭೆಗಳು, 3 ಪುರಸಭೆಗಳು ಹಾಗೂ 3 ಪಟ್ಟಣ ಪಂಚಾಯತಿಗಳಿಗೆ ಈ ಚುನಾವಣೆ ನಡೆಯುತ್ತಿದೆ.

Advertisement

2 ಮಹಾನಗರ ಪಾಲಿಕೆಗಳ ಒಟ್ಟು 105 ಸ್ಥಾನಗಳು, 6 ನಗರಸಭೆಗಳ ಒಟ್ಟು 194 ವಾರ್ಡ್ ಗಳು, 3 ಪುರಸಭೆಗಳ ಒಟ್ಟು 69 ವಾರ್ಡ್ ಗಳು ಮತ್ತು 3 ಪಟ್ಟಣ ಪಂಚಾಯತಿಗಳ ಒಟ್ಟು 50 ವಾರ್ಡ್ ಗಳು ಸೇರಿದಂತೆ ಒಟ್ಟಾರೆಯಾಗಿ 14 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 418 ವಾರ್ಡ್ ಗಳ ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಗೆ  ಈ ಚುನಾವಣೆ ನಡೆಯುತ್ತಿದೆ. ಈ ಎಲ್ಲಾ ವಾರ್ಡ್ ಗಳಲ್ಲಿನ ಒಟ್ಟು 1388 ಮತಗಟ್ಟೆಗಳಲ್ಲಿ 13,04,614 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳೂ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ನವಂಬರ್ 12ರಂದು ಚುನಾವಣೆ ನಡೆಯಲಿದ್ದು ನವಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಇವುಗಳ ಜೊತೆಯಲ್ಲಿ 5 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಸಹ ನಡೆಯಲಿದೆ. ಚುನಾವಣೆ ಘೋಷಣೆ ಆಗಿರುವ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು ಇದು ನವಂಬರ್ 14ರವರೆಗೆ ಜಾರಿಯಲ್ಲಿರುತ್ತದೆ.

ಅಕ್ಟೋಬರ್ 24ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿರುತ್ತದೆ. ನವಂಬರ್ 02ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ನವಂಬರ್ 04 ಕೊನೆಯ ದಿನವಾಗಿರುತ್ತದೆ. ನವಂಬರ್ 12ರಂದು ಅಗತ್ಯವಿರುವ ಕಡೆಗಳಲ್ಲಿ ಮತದಾನ ನಡೆಯಲಿದೆ. ಮರುಮತದಾನ ಅಗತ್ಯವಿರುವ ಕಡೆಗಳಲ್ಲಿ ನವಂಬರ್ 13ರಂದು ಮತದಾನ ನಡೆಯಲಿದೆ. ನವಂಬರ್ 14ರ ಗುರುವಾರದಂದು ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶವೂ ಪ್ರಕಟಗೊಳ್ಳಲಿದೆ.

ಯಾವೆಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳು, ರಾಮನಗರ ಜಿಲ್ಲೆಯ ಕನಕಪುರ ನಗರಸಭೆಯ ಒಟ್ಟು 31 ವಾರ್ಡ್ ಗಳು, ಮಾಗಡಿ ಪುರಸಭೆಯ 23 ವಾರ್ಡ್ ಗಳು, ದಾವಣಗೆರೆ ಜಿಲ್ಲೆಯ ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳು, ಕೋಲಾರ ಜಿಲ್ಲೆಯ ಕೋಲಾರ ನಗರಸಭೆಯ 35 ವಾರ್ಡ್ ಗಳು, ಮುಳಬಾಗಿಲು ನಗರಸಭೆಯ 31 ವಾರ್ಡ್ ಗಳು, ಕೆ.ಜಿ.ಎಫ್. (ರಾಬರ್ಟ್ ಸನ್ ಪೇಟ್) ನಗರ ಸಭೆಯ 35 ವಾರ್ಡ್ ಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಸಭೆಯ 31 ವಾರ್ಡ್ ಗಳು, ಚಿಂತಾಮಣಿ ನಗರಸಭೆಯ 31 ವಾರ್ಡ್ ಗಳು, ಶಿವಮೊಗ್ಗ ಜಿಲ್ಲೆಯ ಜೋಗ್ – ಕಾರ್ಗಲ್ ಪಟ್ಟಣ ಪಂಚಾಯತ್ 11 ವಾರ್ಡ್ ಗಳು, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಯ 23 ವಾರ್ಡ್ ಗಳು, ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿಯ 19 ವಾರ್ಡ್ ಗಳು, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆಯ 23 ವಾರ್ಡ್ ಗಳು, ಕೂಡ್ಲಿಗಿ ಪಟ್ಟಣ ಪಂಚಾಯತಿಯ 20 ವಾರ್ಡ್ ಗಳಿಗೆ ಈ ಚುನಾವಣೆ ನಡೆಯುತ್ತಿದೆ.

Advertisement

ಹಾಸನ ಜಿಲ್ಲೆಯ ಹೊಳೆನರಸೀಪುರ ಪುರಸಭೆ, ಚಾಮರಾಜನಗರದ ಕೊಳ್ಳೇನಾಲ ನಗರಸಭೆ, ವಿಜಯಪುರದ ಚಡಚಣ ಪಟ್ಟಣ ಪಂಚಾಯತಿ, ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಮತ್ತು ಕಲಬುರಗಿಯ ಚಿತ್ತಾಪುರ ಪುರಸಭೆ ತಲಾ ಒಂದು ವಾರ್ಡ್ ಗಳಲ್ಲಿಯೂ ಉಪಚುನಾವಣೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಎಲ್ಲಾ ಐದು ವಾರ್ಡ್ ಗಳಲ್ಲಿನ ಹಾಲೀ ಸದಸ್ಯರ ನಿಧನದಿಂದ ಈ ಸ್ಥಾನಗಳು ತೆರವಾಗಿತ್ತು.

ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಿಗೆ ನೋಟಾ ಚಲಾವಣೆಗೆ ಅವಕಾಶವಿದೆ. ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗಿದೆ.

ರಾಜಕೀಯ ಪಕ್ಷಗಳ‌ ಬ್ಯಾನರ್, ಕಟೌಟ್ ತೆರವುಗೊಳಿಸಲು ಸೂಚನೆ
ಮಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ. ಹಾಗಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಚಿತ್ರ ಇರುವ  ಎಲ್ಲಾ ರೀತಿಯ ಕಟೌಟ್, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳನ್ನು ಸಂಬಂಧಪಟ್ಟವರು ತಕ್ಷಣದಿಂದಲೇ ತೆರವುಗೊಳಿಸಲು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next