ನವದೆಹಲಿ:ನಕಲಿ ವೋಟರ್ ಐಡಿ ಹಾಗೂ ಡುಪ್ಲಿಕೇಟ್ ಹಾವಳಿ ಕಡಿಮೆ ಮಾಡಲು ವೋಟರ್ ಐಡಿ(ಮತದಾರರ ಗುರುತುಪತ್ರ)ಯನ್ನು ಆಧಾರ್ ನಂಬರ್ ಜೊತೆ ಜೋಡಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸಚಿವಾಲಯಕ್ಕೆ ಈ ಮೊದಲು ಬರೆದ ಪತ್ರದಲ್ಲಿ 1950ರ ಜನಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಮತ್ತು ನಕಲಿ ಮತದಾರರ ಗುರುತುಪತ್ರ ಹಾಗೂ ನಕಲಿ ಗುರುತು ಪತ್ರಕ್ಕೆ ಕಡಿವಾಣ ಹಾಕಲು ವೋಟರ್ ಐಡಿಯನ್ನು ಆಧಾರ್ ಜತೆ ಲಿಂಕ್ ಮಾಡಬೇಕು ಎಂದು ಉಲ್ಲೇಖಿಸಿತ್ತು.
ನಕಲಿ ಮತದಾನಕ್ಕೆ ಕಡಿವಾಣ ಮತ್ತು ಒಬ್ಬ ವ್ಯಕ್ತಿ ಕೇವಲ ಒಂದೇ ಮತ ಚಲಾಯಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಕೆಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದೆ. ಆಧಾರ್ ನ 12 ಸಂಖ್ಯೆಯನ್ನು ಎಲ್ಲಾ ವೋಟರ್ ಐಡಿಗೆ ಸ್ವಯಂ ಆಗಿ ಜೋಡಿಸುವುದಾಗಿ ಚುನಾವಣಾ ಆಯೋಗ ಈ ಮೊದಲು ತಿಳಿಸಿತ್ತು.
ಆದರೆ 2016ರಲ್ಲಿ ಕೇಂದ್ರದ ಮಾಜಿ ಮುಖ್ಯ ಚುನಾವಣಾಧಿಕಾರಿ ಎಕೆ ಜೋಟಿ ಅವರು ಅಧಿಕಾರ ಸ್ವೀಕರಿಸಿದ್ದ ವೇಳೆ ಈ ನಿರ್ಧಾರವನ್ನು ಚುನಾವಣಾ ಆಯೋಗ ಬದಲಿಸಿತ್ತು. ಏತನ್ಮಧ್ಯೆ ಸುಮಾರು 32 ಕೋಟಿ ಜನರ ಆಧಾರ್ ನಂಬರ್ ಅನ್ನು ವೋಟರ್ ಐಡಿಗೆ ಜೋಡಿಸಲಾಗಿತ್ತು.
ಮತ್ತೊಂದೆಡೆ 2015ರಲ್ಲಿ ಸುಪ್ರೀಂಕೋರ್ಟ್ ಆಧಾರ್ ನಂಬರ್ ಅನ್ನು ಸರಕಾರಿ ಯೋಜನೆಗಳಿಗೆ ಹೊರತುಪಡಿಸಿ ಬೇರೆ ಯಾವುದಕ್ಕೂ ಉಪಯೋಗಿಸದಂತೆ ತಡೆ ನೀಡಿತ್ತು. 2017ರಲ್ಲಿ ವೋಟರ್ ಐಡಿ ಮತ್ತು ಆಧಾರ್ ಸಂಖ್ಯೆ ಜೋಡಿಸಿದ್ದ ವಿವರಗಳನ್ನು ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ನೀಡಿತ್ತು.