ಹೊಸದಿಲ್ಲಿ : ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಪ್ರಸ್ತಾವವನ್ನು ತಾನು ಬೆಂಬಲಿಸುವುದಾಗಿ ಚುನಾವಣಾ ಆಯೋಗ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಸಂಬಂಧದ PIL ಅರ್ಜಿಗೆ ಸಂಬಂಧಪಟ್ಟು ಚುನಾವಣಾ ಆಯೋಗವು ತನ್ನ ಅಭಿಮತವನ್ನು ಅಫಿದಾವಿತ್ ಮೂಲಕ ಸುಪ್ರೀಂ ಕೋರ್ಟಿಗೆ ಅರುಹಿದೆ.
2017ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, “ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕು” ಎಂಬ ಪ್ರಸ್ತಾವಕ್ಕೆ ಸಂಬಂಧಪಟ್ಟು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿತ್ತು.
”ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಿಂದ ಜಯಿಸಿದ ಸಂದರ್ಭದಲ್ಲಿ ಉಪ ಚುನಾವಣೆಯನ್ನು ನಡೆಸುವ ಖರ್ಚು ವೆಚ್ಚದ ಹೊರೆ ಸರಕಾರದ ಖಜಾನೆಗೆ ಬೀಳುತ್ತದೆ. ಆದುದರಿಂದ ಇದನ್ನು ತಪ್ಪಿಸುವ ಸಲುವಾಗಿ ಒಬ್ಬ ಅಭ್ಯರ್ಥಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಅವಕಾಶ ನೀಡಬಾರದು” ಎಂದು ಆಗ್ರಹಿಸಿ ಬಿಜೆಪಿ ನಾಯಕ ಹಾಗೂ ವಕೀಲರಾಗಿರುವ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ವಡೋದರ ಮತ್ತು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಿಸಿದ್ದುದು ತಾಜಾ ಉದಾಹರಣೆಯಾಗಿತ್ತು.
ಇಂತಹ ವಿದ್ಯಮಾನಗಳನ್ನು ನಿವಾರಿಸುವ ಸಲುವಾಗಿ ಉಪಾಧ್ಯಾಯ ಅವರು ಜನತಾ ಪ್ರಾತಿನಿಧ್ಯ ಕಾಯಿದೆಯ 33(7) ಸೆಕ್ಷನ್‌ಗೆ ತಿದ್ದುಪಡಿಯನ್ನು ಬಯಸಿದ್ದರು. ಚುನಾವಣೆಗಳಲ್ಲಿ ಪಕ್ಷೇತರರು ಸ್ಪರ್ಧಿಸುವುದರ ವಿರುದ್ಧವೂ ಉಪಾಧ್ಯಾಯ ಅವರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶವನ್ನು ಕೋರಿದ್ದರು.