ಪಾಟ್ನಾ:ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ನಿಧಾನಗತಿಯಲ್ಲಿ ಸಾಗಿದ್ದು, ಏತನ್ಮಧ್ಯೆ ಫಲಿತಾಂಶ ಹಾಗೂ ಮತಎಣಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ(ನವೆಂಬರ್ 10, 2020) ಮಧ್ಯಾಹ್ನ 1.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ತಿಳಿಸಿದೆ.
ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದು, ಡೆಪ್ಯುಟಿ ಇಲೆಕ್ಷನ್ ಕಮಿಷನರ್ ಗಳಾದ ಸುದೀಪ್ ಜೈನ್, ಚಂದ್ರಭೂಷಣ್ ಕುಮಾರ್ ಮತ್ತು ಅಶೀಶ್ ಕುಂದ್ರಾ ಅವರು ಜಂಟಿಯಾಗಿ ಮಾಧ್ಯಮಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ವರದಿ ಹೇಳಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 128 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ, ಜೆಡಿಯು 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ರಾಷ್ಟ್ರೀಯ ಜನತಾದಳ (ಆರ್ ಜೆಡಿ) 61 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶ ತಿಳಿಸಿದೆ.
243 ಸದಸ್ಯಬಲದ ಬಿಹಾರ ವಿಧಾನಸಭೆ ಪೈಕಿ ಬಹುಮತಕ್ಕೆ 122 ಶಾಸಕರ ಬೆಂಬಲದ ಅಗತ್ಯವಿದೆ. 55 ಕೇಂದ್ರಗಳಲ್ಲಿ ಮತಎಣಿಕೆ ನಡೆಯುತ್ತಿದ್ದು, ಕೋವಿಡ್ 19 ಮುಂಜಾಗ್ರತಾ ಕ್ರಮ ಅನುಸರಿಸಿ ಮತಎಣಿಕೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಪ್ರಸ್ತುತ ಮತಎಣಿಕೆಯ ಟ್ರೆಂಡ್ ಪ್ರಕಾರ, ಬಿಜೆಪಿ ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಭಾರತೀಯ ಜನತಾ ಪಕ್ಷ ಶೇ.20ರಷ್ಟು ಮತಪಡೆದಿದ್ದು, ಆರ್ ಜೆಡಿ ಶೇ.23.35ರಷ್ಟು ಮತಗಳನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ 15.46ರಷ್ಟು ಮತ ಪಡೆದಿದೆ ಎಂದು ವರದಿ ತಿಳಿಸಿದೆ.