ನವದೆಹಲಿ: “ಚುನಾವಣೆಗೂ ಮುನ್ನ ಅಥವಾ ಚುನಾವಣೆಯ ನಂತರ ಯಾವುದೇ ರಾಜಕೀಯ ಪಕ್ಷ ನೀಡಿರುವ ಆಶ್ವಾಸನೆಗಳನ್ನು ಆ ಪಕ್ಷ ಅಧಿಕಾರಕ್ಕೆ ಬಂದಾಗ ಈಡೇರಿಸಲು ಮುಂದಾದರೆ ಅದನ್ನು ತಡೆಯುವ ಅಧಿಕಾರ ತನಗಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಆಯೋಗ, “ಯಾವುದೇ ರಾಜ್ಯದ ರಾಜಕೀಯ ಪಕ್ಷವು ಅಧಿಕಾರಕ್ಕೆ ಬಂದ ನಂತರ ತನ್ನ ಚುನಾವಣಾ ಆಶ್ವಾಸನೆಗಳಿಗೆ ಅನುಗುಣವಾಗಿ ಕೈಗೊಳ್ಳುವ ಕೆಲವು ಆರ್ಥಿಕ ನಿರ್ಧಾರಗಳನ್ನು ತಡೆಯುವ ಅಧಿಕಾರ ತನಗಿಲ್ಲ. ಆಯೋಗದ ಅಧಿಕಾರಕ್ಕೆ ಕುರಿತಾಗಿ ಸದ್ಯಕ್ಕಿರುವ ನಿಯಮಗಳಿಗೆ ತಿದ್ದುಪಡಿ ತಂದರೆ ಮಾತ್ರ ಆಯೋಗಕ್ಕೆ ಇಂಥ ಅಧಿಕಾರ ಸಿಗಲು ಸಾಧ್ಯ’ ಎಂದು ಹೇಳಿದೆ.
ಅಲ್ಲದೆ, ರಾಜಕೀಯ ಪಕ್ಷವು ಜಾರಿಗೊಳಿಸಲು ಮುಂದಾಗುವ ತನ್ನ ಆಶ್ವಾಸನೆಗಳು ಆಯಾ ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಆ ರಾಜ್ಯದ ಮತದಾರರೇ ಅರ್ಥೈಸಬೇಕು ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ :ವಿಜಯಪುರ : ಸಿಡಿಲು ಬಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸ್ಥಳದಲ್ಲೇ ಸಾವು
“ದೇಶದ ಚುನಾವಣಾ ಪ್ರಕ್ರಿಯೆಗಳಲ್ಲಿ ಸುಧಾರಣೆ ತರುವ ಆಶಯದಿಂದ 2016ರಲ್ಲಿ 47 ಶಿಫಾರಸುಗಳನ್ನು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಸಾರ್ವಜನಿಕರ ಹಣವನ್ನು ಮತದಾರರಿಗೆ ಯಾವುದೇ ಸಾಮಗ್ರಿಗಳ ಹಂಚಿಕೆ ಅಥವಾ ಸವಲತ್ತುಗಳನ್ನು ಮಾಡಿಕೊಡಲು ಬಳಸಿಕೊಂಡರೆ ಅಂಥ ಪಕ್ಷವನ್ನು ನಿಷೇಧಗೊಳಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಅಂದರೆ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಆಯೋಗ ಹೇಳಿದೆ.