Advertisement

Election Commission ದ್ವೇಷ ಭಾಷಣ: ಬಿಜೆಪಿ, ಕಾಂಗ್ರೆಸ್‌ಗೆ ತಪರಾಕಿ

01:26 AM May 23, 2024 | Team Udayavani |

ಹೊಸದಿಲ್ಲಿ: ಚುನಾವಣ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಚುನಾವಣ ಆಯೋಗ, “ಜಾತಿ, ಸಮುದಾಯ, ಭಾಷೆ ಮತ್ತು ಧರ್ಮಾಧಾರಿತ ಪ್ರಚಾರ ಕೈಗೊಳ್ಳಬಾರದು.

Advertisement

ಸಶಸ್ತ್ರ ಪಡೆಗಳನ್ನು ರಾಜಕೀಯ ಗೊಳಿಸಬಾರದು’ ಎಂದು ತಾಕೀತು ಮಾಡಿದೆ.ಲೋಕಸಭೆ ಚುನಾ ವಣೆಯ 2 ಹಂತಗಳ ಮತದಾನ ಬಾಕಿಯಿರುವಂತೆಯೇ ಆಯೋಗದಿಂದ ಈ ಸೂಚನೆ ಹೊರಬಿದ್ದಿದೆ. ಬಿಜೆಪಿಯ ಅಗ್ರನಾಯಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರದ ವೇಳೆ ಚುನಾವಣ ಮಾದರಿ ನೀತಿ ಸಂಹಿತೆ ಉಲ್ಲಂ ಸಿದ್ದಾರೆಂದು ಉಭಯ ಪಕ್ಷಗಳು ಪರಸ್ಪರ ದೂರು ದಾಖಲಿಸಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಧ್ಯಕ್ಷರಿಗೆ ಚುನಾವಣ ಆಯೋಗವು ಎ. 25ರಂದು ನೋಟಿಸ್‌ ನೀಡಿತ್ತು. ಪಕ್ಷಗಳು ನೀಡಿದ ಪ್ರತಿಕ್ರಿಯೆ ಆಧರಿಸಿ, ಆಯೋಗವು ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಚುನಾವಣೆಗಾಗಿ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ಹಾಳು ಮಾಡಬಾರದು. ತಾರಾ ಪ್ರಚಾರಕರ ಹೇಳಿಕೆಗಳು ಚುನಾವಣ ನೀತಿ ಸಂಹಿತೆಯನ್ನು ಉಲ್ಲಂ ಸುತ್ತವೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಯೋಗ ಹೇಳಿದೆ.

ಚುನಾವಣ ಪ್ರಕ್ರಿಯೆ ಎಂದರೆ, ರಾಜಕೀಯ ಪಕ್ಷಗಳು ಸ್ಪರ್ಧಿಸುವುದಷ್ಟೇ ಅಲ್ಲ.ಬದಲಿಗೆ, ಚುನಾವಣೆ ಎಂಬುದು ಮತದಾರ ಸಮುದಾಯಕ್ಕೆ ತಾವು ಹೇಗೆ ಆದರ್ಶಪ್ರಾಯರು ಎಂಬುದನ್ನು ತಿಳಿಸುವ ಅವಕಾಶವೂ ಆಗಿರುತ್ತದೆ. ಭರವಸೆ ಮೂಡಿಸುವ ಪ್ರಕ್ರಿಯೆಯೂ ಆಗಿರುತ್ತದೆ ಎಂದು ಆಯೋಗ ತಿಳಿಸಿದೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರಸ್ಪರ ದ್ವೇಷಕ್ಕೆ ಕಾರಣವಾಗುವ, ಈಗಿರುವ ಬಿಕ್ಕಟ್ಟು ಉಲ್ಬಣಗೊಳಿಸುವ, ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಸ್ಪಷ್ಟವಾಗಿ ಆಯೋಗ ಸೂಚಿಸಿದೆ. ತಾಂತ್ರಿಕ ದೋಷಗಳು ಮತ್ತು ತೀವ್ರತರ ವ್ಯಾಖ್ಯಾನಗಳು ಪಕ್ಷಗಳು ಮತ್ತು ಅವರ ಪ್ರಚಾರಕರ ಪ್ರಮುಖ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿಯಾಗಬಾರದು. ಚುನಾವಣ ಭಾಷಣಗಳು ಪ್ರಚಾರದ ಗುಣಮಮಟ್ಟ ಇನ್ನಷ್ಟು ಕುಸಿಯದಂತೆ ನೋಡಿಕೊಳ್ಳಬೇಕು ಎಂದು ಆಯೋಗವು ಹೇಳಿದೆ.

Advertisement

ಚುನಾವಣ ಆಯೋಗ ಹೇಳಿದ್ದೇನು?
-ತಾರಾ ಪ್ರಚಾರಕರ ಭಾಷಣ ಕುರಿತು ಎರಡೂ ಪಕ್ಷಗಳು ನೀಡಿರುವ ಸಮರ್ಥನೆ ಒಪ್ಪತಕ್ಕದ್ದಲ್ಲ.
-ಬಿಜೆಪಿ ಮತ್ತು ಅದರ ತಾರಾ ಪ್ರಚಾರಕರು ಧರ್ಮ ಮತ್ತು ಕೋಮು ಆಧಾರದಲ್ಲಿ ಮಾತನಾಡಬಾರದು.
-ಸಮಾಜವನ್ನು ವಿಭಜಿಸುವ ಭಾಷಣಗಳನ್ನು ನಿಲ್ಲಿಸಬೇಕು. ದೇಶದ ಸೂಕ್ಷ್ಮ, ಸಂಯೋಜಿತ ನೇಯ್ಗೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.
-ರಾಜಕೀಯ ಪಕ್ಷಗಳು ದೇಶದ ಭದ್ರತಾ ಪಡೆಗಳನ್ನು ರಾಜಕೀಯಗೊಳಿಸಬಾರದು.
-ಅಗ್ನಿಪಥ ಯೋಜನೆ ಹಾಗೂ ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್‌ ಸುಳ್ಳು ಮಾಹಿತಿ ಹರಡಬಾರದು.
-ಭದ್ರತಾ ಪಡೆಗಳ ಸಾಮಾಜಿಕ ಆರ್ಥಿಕ ಸಂಯೋಜನೆಯ ಕುರಿತು ಸಂಭಾವ್ಯ ವಿಭಜನಕಾರಿ ಹೇಳಿಕೆ ನೀಡಬಾರದು.

ಬಿಜೆಪಿ, ಕಾಂಗ್ರೆಸ್‌ ನೀಡಿದ್ದ ದೂರೇನು?
ದೇಶದ ಜನರ ಸಂಪತ್ತನ್ನು ಕಾಂಗ್ರೆಸ್‌ ಮರುಹಂಚಿಕೆ ಮಾಡಲಿದೆ ಎಂದು  ರಾಜಸ್ಥಾನದ ಬಾಂಸವಾಡದಲ್ಲಿ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆ ವಿಭಜನಕಾರಿಯಾಗಿದೆ ಎಂದು ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿತ್ತು. ಜತೆಗೆ, ಮೋದಿಯವರು ಒಂದು ದೇಶ, ಒಂದು ಭಾಷೆ, ಒಂದು ಧರ್ಮವನ್ನು ಜಾರಿ ಮಾಡಲು ಹೊರಟಿದ್ದಾರೆ ಎಂಬ ರಾಹುಲ್‌ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿಯು ಆಯೋಗಕ್ಕೆ ದೂರು ನೀಡಿತ್ತು. ಈ ಕುರಿತು ಎರಡೂ ಪಕ್ಷಗಳು ನೀಡಿದ್ದ ಸಮರ್ಥನೆಯನ್ನು ಆಯೋಗ ಒಪ್ಪಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next