ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಏ.26 ರಂದು ಮುಹೂರ್ತ ನಿಗದಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ತತ್‌ಕ್ಷಣದಿಂದ ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಸಾಧನೆ, ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಿ ರಾರಾಜಿಸುತ್ತಿದ್ದ ಫ್ಲೆಕ್ಸ್, ಬ್ಯಾನರ್‌ಗಳ ತೆರವು ಕಾರ್ಯ ಜಿಲ್ಲಾದ್ಯಂತ ಭರದಿಂದ ಸಾಗಿದೆ.
ಅತ್ತ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ ಬೆನ್ನಲೇ ಜಾರಿಗೊಂಡ ಮಾದರಿ ನೀತಿ ಸಂಹಿತೆಯಿಂದ ಎಚ್ಚೆತ್ತ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವ ಕಾಂಗ್ರೆಸ್ ಸರ್ಕಾರದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ದೃಶ್ಯಗಳು ಶನಿವಾರ ಸಂಜೆ ಕಂಡು ಬಂದವು.
ಗೋಡೆ ಬರಹಗಳ ತೆರವು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೇ ಬಂದರೆ ಒಂದು ವರ್ಷ ತುಂಬ ಲಿದ್ದು, ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಿದ್ದ ಪ್ರಚಾರ ಫಲಕಗಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬೆನ್ನಲೇ ಮುತ್ತಿಗೆ ಹಾಕಿದ್ದ ಸ್ಥಳೀಯ ಸಂಸ್ಥೆಗಳ ನೌಕರರು, ಹಲವು ತಿಂಗಳಿಂದ ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ರಾರಾಜಿಸುತ್ತಿದ್ದ ಪ್ಲೆಕ್ಸ್, ಬ್ಯಾನರ್‌ಗಳನ್ನು ತೆರವು ಗೊಳಿ ಸಿ ದರೆ ಗೋಡೆ ಬರಹಗಳನ್ನು ಅಳಿಸಿ ಹಾಕಿದರು.
ಇನ್ನೂ ಜಿಲ್ಲಾ ಕೇಂದ್ರದ ತಾಪಂ ಕಚೇರಿ ಆವರಣ, ಜಿಲ್ಲಾ ನ್ಯಾಯಾಲಯ ಆವರಣದ ಸಮೀಪ, ಉಪ ವಿಭಾಗಾಧಿಕಾರಿಗಳ ಕಚೇರಿ, ಟಿ.ಚೆನ್ನಯ್ಯ ಪಾರ್ಕ್, ಜಿಲ್ಲಾಧಿಕಾರಿಗಳ ಕಚೇರಿ ಅಂಗಳದಲ್ಲಿ ಹಾಗೂ ಜಿಲ್ಲೆಯ ತಾಪಂ, ಗ್ರಾಪಂಗಳ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹಾಕಲಾಗಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜಾಹೀರಾತು ಪ್ರಚಾರ ಫಲಕಗಳಲ್ಲಿ ರಾರಾಜಿಸುತ್ತಿದ್ದ ಮುಖ್ಯಮಂತ್ರಿಗಳ, ವಿವಿಧ ಇಲಾಖೆಗಳ ಸಚಿವರ ಭಾವಚಿತ್ರ ಸಮೇತ ಅಳವಡಿಸಿದ್ದ ಇಲಾಖೆಯ ಸಾಧನೆಗಳ
ಪ್ರಚಾರ ಫಲಕಗಳನ್ನು ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ತೆರವುಗೊಳಿಸಿ ಮಾದರಿ ನೀತಿ ಸಂಹಿತೆಯ ಬಿಸಿ ಮುಟ್ಟಿಸಿ ಸಿಬ್ಬಂದಿ ಗಮನ ಸೆಳೆದರು.
ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೊಂಡ 24 ಗಂಟೆಯಲ್ಲಿ ಸರ್ಕಾರದ ಪ್ರಚಾರ ಫಲಕಗಳು, ಫ್ಲೆಕ್ಸ್Õ, ಬ್ಯಾನರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದೆ. ಸರ್ಕಾರದ ವೈಬ್‌ಸೈಟ್‌ಗಳಲ್ಲಿ ಕೂಡ ಚುನಾಯಿತ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಲಾಗುವುದು. ರಾಜಕೀಯ ಪಕ್ಷಗಳ ಪರ ಇರುವ ಗೋಡೆ ಬರಹವನ್ನು ಸಂಪೂರ್ಣವಾಗಿ ಅಳಿಸಲಾಗುವುದು.
-ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ.
– ಕಾಗತಿ ನಾಗರಾಜಪ್ಪ