ಮಲ್ಪೆ: ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ಫ್ಲೆಕ್ಸ್ ಬ್ಯಾನರ್ ಉದ್ಯಮವನ್ನೇ ನಂಬಿ ಕೊಂಡು ಜೀವನ ಸಾಗಿಸುವ ಕುಟುಂಬ ಗಳು ಇದೀಗ ಸಂಕಷ್ಟಕ್ಕೆ ಒಳಗಾಗಿದೆ. ಚುನಾವಣೆ ಘೋಷಣೆಯಾದಂದಿನಿಂದ ಬ್ಯಾನರ್, ಮುದ್ರಣ ಉದ್ಯಮಕ್ಕೆ ಭಾರಿ ಹೊಡೆತ ಉಂಟಾಗಿದ್ದು ಸಂಬಂಧಪಟ್ಟ ಎಲ್ಲ ವಾಹಿವಾಟುಗಳು ಹಿನ್ನಡೆ ಕಂಡಿದೆ.
ಚುನಾವಣೆ ಘೋಷಣೆಯಾದ ಅನಂತರ ರಾಜಕೀಯೇತರ ಸಭೆ ಸಮಾರಂಭ, ದೇವಸ್ಥಾನ, ಭಜನಾ ಮಂದಿರಗಳ ಕಾರ್ಯಕ್ರಮ, ಇನ್ನಿತರ ಕಾರ್ಯಕ್ರಮಗಳು ಇದ್ದರೂ ಬ್ಯಾನರ್ ಅಳವಡಿಸುವುದಕ್ಕೂ ಕಟ್ಟು ನಿಟ್ಟಿನ ಕಾನೂನು ಕ್ರಮಗಳು ಇರುವುದರಿಂದಾಗಿ ರಾಜಕೀಯೇತರ ಕಾರ್ಯಕ್ರಮಗಳ ಬ್ಯಾನರ್‌ಗಳನ್ನು ಮುದ್ರಿಸುವಲ್ಲಿ ಬಹುತೇಕ ಸಂಘಟಕರು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲದಕ್ಕೂ ಬ್ಯಾನರ್ ಅವಶ್ಯಕ ಎನ್ನುವಂತಾಗಿದೆ. ಸಭೆ ಸಮಾರಂಭ, ಜಾತ್ರೆ, ಉತ್ಸವ, ಸರಕಾರಿ ನಾಮ ಫಲಕಗಳು ಮಾತ್ರವಲ್ಲದ ಹುಟ್ಟುಹಬ್ಬ ಮತ್ತು ಸಾವಿಗೂ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಲಾಗುತ್ತದೆ. ಹಾಗಾಗಿ ಪ್ಲೆಕ್ಸ್, ಬ್ಯಾನರ್ ಪ್ರಚಾರದ ಪ್ರಮುಖ ಅಂಗವಾಗಿದೆ. ಹೆಚ್ಚಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇವಸ್ಥಾನ, ದೈವಸ್ಥಾನಗಳ, ಭಜನಾ ಮಂದಿರಗಳ ಉತ್ಸವಾದಿಗಳು ನಡೆ ಯುತ್ತಿರುವುದರಿಂದ ಈ ಅವಧಿಯಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ಈ ವೇಳೆಯಲ್ಲಿಯೇ ಚುನಾವಣೆ ನೀತಿ ಸಂಹಿತೆ ಹೇರಿದ್ದರಿಂದ ಬ್ಯಾನರ್ ವ್ಯವ ಹಾರವೇ ಸ್ಥಗಿತವಾಗಿದೆ.
ಒಂದಡೆ ಸರಕಾರದ ಇಲಾಖೆಗಳು ಬಡವರಿಗೆ ಮುದ್ರಣಯಂತ್ರ ಖರೀದಿ ಸಲು ಸಾಲಸೌಲಭ್ಯದ ವ್ಯವಸ್ಥೆಯನ್ನು ನೀಡುತ್ತದೆ. ಇನ್ನೊಂದಡೆ ಚುನಾವಣಾ ಆಯೋಗ ನಿಯಮವನ್ನು ಬಿಗಿಗೊಳಿಸಿ ಮುದ್ರಣ ಉದ್ಯಮದ ಕತ್ತು ಹಿಸುಕುತ್ತಿವೆ. ಹೀಗೆ ಆದರೆ ನಿರ್ವಹಣೆ, ಪಡಕೊಂಡ ಸಾಲವನ್ನು ಮರುಪಾವತಿಸುವುದಾದರೂ ಹೇಗೆ ಎನ್ನುತ್ತಾರೆ ಗಿರಿ ಕ್ರಿಯೇಶನಿನ ಮಾಲಕ ಗಿರೀಶ್ ಮೈಂದನ್.