Advertisement
ಮನುಷ್ಯರ ಮೂಲಕ ಟಾಯ್ಲೆಟ್ ಹೊಂಡ ಶುಚಿ ಮಾಡುವ ಕೆಲಸಕ್ಕೆ ನಿರ್ಬಂಧ ಹೇರಿದ ಬಳಿಕ, ಸಕ್ಕಿಂಗ್ ಯಂತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಯ ಯಂತ್ರವನ್ನು ಪಟ್ಟಣಕ್ಕೆ ಮಾತ್ರ ಸೀಮಿತ ಮಾಡಿಲ್ಲ. ತನ್ನ ವ್ಯಾಪ್ತಿಯಾಚೆಗೆ ಇರುವ ಗ್ರಾಮಾಂತರ ಭಾಗದಿಂದ ಬರುವ ಕರೆಗಳಿಗೂ ಸ್ಪಂದಿಸುತ್ತಿದೆ. ಕುಂಬ್ರ, ವಿಟ್ಲ, ನರಿಮೊಗರು ಭಾಗಗಳ ಟಾಯ್ಲೆಟ್ ಹೊಂಡಗಳನ್ನೂ ಶುಚಿ ಮಾಡಿಸುತ್ತಿದೆ. ಇದೀಗ ಇಷ್ಟು ಕಡೆಯ ಟಾಯ್ಲೆಟ್ ಹೊಂಡಗಳು ತುಂಬಿವೆ. ತೆರವಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆ ಅಥವಾ ಸಾರ್ವಜನಿಕ ಶೌಚಾಲಯಗಳ ಸುತ್ತ ಮುತ್ತಲಿನ ಜನರು ಮೂಗು ಮುಚ್ಚಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ತಾ.ಪಂ.ನಲ್ಲೂ ಇದೆ
ವರ್ಷಗಳ ಹಿಂದೆ ನಗರಸಭೆಯ ಸಕ್ಕಿಂಗ್ ಯಂತ್ರ ಕೆಟ್ಟು ನಿಂತಿತ್ತು. ಆಗ ತಾಲೂಕು ಪಂಚಾಯತ್‌ನ ಸಕ್ಕಿಂಗ್ ಯಂತ್ರವನ್ನು ಎರವಲು ಪಡೆದುಕೊಳ್ಳಲಾಗಿತ್ತು. ಪುತ್ತೂರು ನಗರಸಭೆಯ ಇಂತಹ ತ್ಯಾಜ್ಯವನ್ನು ಬನ್ನೂರಿನ ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ. ಆದರೆ ತಾಲೂಕು ಪಂಚಾಯತ್ ಗೆ ಪ್ರತ್ಯೇಕ ಡಂಪಿಂಗ್ ಯಾರ್ಡ್ ಇಲ್ಲದೆ, ಕಳೆದ ಕೆಲ ವರ್ಷಗಳಿಂದ ಸಕ್ಕಿಂಗ್ ಯಂತ್ರ ತುಕ್ಕು ಹಿಡಿಯುತ್ತಾ ಬಿದ್ದಿದೆ. ಇದೀಗ ತಾಲೂಕು ಪಂಚಾಯತ್‌ನ ಸಕ್ಕಿಂಗ್ ಯಂತ್ರ ಕೆಟ್ಟು ನಿಂತಿದೆ. ಆದ್ದರಿಂದ ನಗರಸಭೆ ಈ ಬಾರಿ ಎರವಲು ಪಡೆಯಲು ಸಾಧ್ಯವಿಲ್ಲ. ಪರ್ಯಾಯ ಏನು?
ತಾಲೂಕು ಚುನಾವಣಾಧಿಕಾರಿ ಆಗಿರುವ ಸಹಾಯಕ ಆಯುಕ್ತರ ಅನುಮತಿ ಪಡೆದುಕೊಂಡು, ಸಕ್ಕಿಂಗ್ ಯಂತ್ರ ರಿಪೇರಿಗೆ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಿಗೆ ನಗರಸಭೆ ಪತ್ರ ಬರೆದಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪತ್ರ ಬರೆಯಲಾಗಿದೆ. ಯಾವಾಗ ಉತ್ತರ ಬರುತ್ತದೋ ಯಾವಾಗ ಟೆಂಡರ್ ಆಹ್ವಾನಿಸುತ್ತಾರೋ ಯಾವಾಗ ತುಂಬಿರುವ ಟಾಯ್ಲೆಟ್‌ಗಳು ಶುಚಿ ಆಗುತ್ತವೋ ಒಂದೂ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಚುನಾವಣೆ ಮುಗಿದಿದ್ದರೆ, ಮತ್ತೆ ಈ ಅನುಮತಿಗಳ ಆವಶ್ಯಕತೆಯೇ ಇರುವುದಿಲ್ಲ.
Related Articles
ತುರ್ತು ಕೆಲಸಗಳಿಗೆ ಟೆಂಡರ್ ಕರೆಯಲು ಅನುಮತಿ ನೀಡಲಾಗುವುದು. ನಗರಸಭೆಯಿಂದ ಪತ್ರ ಬಂದ ಕೂಡಲೇ ವ್ಯವಸ್ಥೆ ಮಾಡುತ್ತೇನೆ. ಚುನಾವಣಾ ನೀತಿ ಸಂಹಿತೆ ತುರ್ತು ಕೆಲಸಗಳಿಗೆ ಅಡ್ಡಿ ಉಂಟು ಮಾಡುವುದಿಲ್ಲ. ಆದರೆ ಅದಕ್ಕೆ ಮೊದಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಳ್ಳಬೇಕೆಂಬ ನಿಯಮವಿದೆ.
– ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ.
Advertisement
— ಗಣೇಶ್ ಎನ್. ಕಲ್ಲರ್ಪೆ