Advertisement

ಚುನಾವಣಾ ನೀತಿ ಸಂಹಿತೆ: ಪರಿಶೀಲನೆಗೆ ತ್ರಿಸದಸ್ಯ ಸಮಿತಿ’

03:45 AM Jul 02, 2017 | Team Udayavani |

ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬರುವ ಪ್ರಸ್ತಾವನೆಗಳನ್ನು ಭಾರತ ಚುನಾವಣೆ ಆಯೋಗಕ್ಕೆ ಕಳುಹಿಸುವ ಮುನ್ನ ಪರಿಶೀಲಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಸಮಿತಿ ರಚಿಸಲಾಗಿದ್ದು, ಪ್ರಸ್ತಾವನೆ ಸಲ್ಲಿಸಿದ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಡಳಿತ ಸುಧಾರಣೆ ತರಬೇತಿ ಮತ್ತು ರಾಜಕೀಯ ಪಿಂಚಣಿ) ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಸಮಿತಿಯು ಚುನಾವಣೆ ಸಂದರ್ಭದಲ್ಲಿ ಬರುವ ಪ್ರಸ್ತಾವನೆಗಳ ಅಗತ್ಯತೆಯನ್ನು ಪರಿಶೀಲಿಸಿ ತನ್ನ ಟಿಪ್ಪಣಿಯನ್ನು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಚುನಾವಣೆ) ಇವರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಸಮಿತಿಯು ಪರಿಶೀಲಿಸಿದ ಪ್ರಸ್ತಾವನೆಯ ಸಂಪೂರ್ಣ ವಿವರಗಳು ಹಾಗೂ ಆ ಯೋಜನೆಯ ಜಾರಿಯ ತುರ್ತು ಅಗತ್ಯತೆ ಅಂದರೆ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಪ್ರಸ್ತಾವನೆಯನ್ನು ತಡೆಹಿಡಿಯಲು ಏಕೆ ಸಾಧ್ಯವಿಲ್ಲ ಎಂಬ ಬಗ್ಗೆ ಟಿಪ್ಪಣಿಯೊಂದಿಗೆ ಸಂಬಂಧಿಸಿದ ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸುವುದು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಈ ಸಮಿತಿಯ ಸಂಚಾಲಕರಾಗಿದ್ದು ಇಲಾಖೆಗಳು ತಮ್ಮ ಪ್ರಸ್ತಾವನೆಗಳನ್ನು ಇವರಿಗೆ ಸಲ್ಲಿಸಬೇಕು. ಸಮಿತಿಯ ಎಲ್ಲಾ ಚಟುವಟಿಕೆಗಳ ಸಮನ್ವಯವನ್ನು ಇವರು ನಿರ್ವಹಿಸಲಿದ್ದಾರೆ. ಮುಖ್ಯ ಚುನಾವಣಾಧಿಕಾರಿಗಳು ಮಾದರಿ ನೀತಿ ಸಂಹಿತೆಯ ಪ್ರತಿಯನ್ನು ಈ ಸಮಿತಿಗೆ ಒದಗಿಸಲಿದ್ದು ಅದರನ್ವಯ ಸಮಿತಿಯು ಪ್ರಸ್ತಾವನೆಗಳನ್ನು ಪರಿಶೀಲಿಸಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next