Advertisement
ಇದು ಹಲವು ವರ್ಷಗಳ ಕಥೆ-ವ್ಯಥೆ. ಇದೀಗ ಮತ್ತದೇ ಮಹತ್ವ ಮರುಕಳಿಸಿದೆ. ನೀರಾವರಿಗಾಗಿ ರ್ಯಾಲಿ, ಜಾಥಾಗಳು ಜೋರಾಗುತ್ತಿದೆ. ಮತ್ತೂಮ್ಮೆ ನಮ್ಮನ್ನು ಭ್ರಮನಿರಸಗೊಳಿಸಬೇಡಿ ಎಂಬುದು ಈ ಭಾಗದ ಜನರ ಅನಿಸಿಕೆ. ಪಕ್ಷ-ಪಕ್ಷಾತೀತ ಹೆಸರಲ್ಲಿ ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ರ್ಯಾಲಿ, ಜಾಥಾಗಳು ವಿಜೃಂಭಿಸುತ್ತಿವೆ, ರೈತರಿಗೆ ನೀರು ತಂದು ಕೊಡುವುದೇ ನಮ್ಮ ಧ್ಯೇಯ ಎಂಬ ಹೇಳಿಕೆ, ಭಾಷಣಗಳು ಮಾರ್ದನಿಸುತ್ತಿವೆ. ಕಳೆದ ಮೂರ್‍ನಾಲ್ಕು ದಶಕಗಳಿಂದ ಉತ್ತರದ ಜನತೆಗೆ ಮಾಯದ ಜಿಂಕೆಯಾಗಿದೆಯೇ ವಿನಃ ಅನುಷ್ಠಾನದ ಕೆಲಸವಾಗಿಲ್ಲ ಎಂಬುದು ವಾಸ್ತವ. ನೀರಾವರಿ ಯೋಜನೆಗಳ ಜತೆಗೆ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಅನ್ಯಾಯ, ಪ್ರಾದೇಶಿಕ ಅಸಮತೋಲನ ವಿಚಾರಗಳು ಗರಿಗೆದರತೊಡಗಿವೆ.
Related Articles
Advertisement
ಯೋಜನೆಗಳ ವಿಳಂಬಕ್ಕೆ ಕಾರಣರಾರು? ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ವಿಳಂಬಕ್ಕೆ ಕಾರಣ ಯಾರು? ರಾಜ್ಯದಲ್ಲಿ ಅಧಿಕಾರ ನಡೆಸಿರುವ, ನಡೆಸುತ್ತಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳು ಉತ್ತರಿಸಬೇಕಿದೆ. ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿನ ನೀರಾವರಿ ಯೋಜನೆಗಳಿಗೆ ಅಲ್ಲಿನ ಸರಕಾರಗಳ ಇಚ್ಛಾಶಕ್ತಿ ನೋಡಿದರೆ ನಾವು ಅದೆಷ್ಟೋ ಮೈಲು ದೂರದಲ್ಲಿದ್ದೇವೆಂಬ ಅನುಭವವಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರ್ಕಾರದ ಬಿಡಿಕಾಸು ನೆರವಿಲ್ಲದೆಯೇ ಕಾಲೇಶ್ವರಂ ಯೋಜನೆಯನ್ನು ವಿಶ್ವಕ್ಕೆ ಮಾದರಿ ರೂಪದಲ್ಲಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗಿದೆ. ನೀರಾವರಿ-ಕುಡಿಯುವ ನೀರು ಪೂರೈಕೆಗೆ ವಿಶ್ವದ ಅತಿ ದೊಡ್ಡ ಕಾಲೇಶ್ವರಂ ಏತನೀರಾವರಿ ಯೋಜನೆ ಮಾದರಿಯಾಗಿದೆ. ಇನ್ನು ಅವಿಭಜಿತ ಆಂಧ್ರಪ್ರದೇಶದಲ್ಲಿ ವಿವಿಧ ನೀರಾವರಿ ಯೋಜನೆಗಳಿಗಾಗಿ ಕೈಗೊಂಡ ಜಲಯಜ್ಞಂ, ಮಹಾರಾಷ್ಟ್ರದಲ್ಲಿ ಭೀಮಾ ನದಿಯನ್ನೇ ಕಾಲುವೆ ಮೂಲಕ ತಿರುಗಿಸಿದ್ದು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಮೊಳಗುತ್ತಿವೆ. ನಮ್ಮಲ್ಲಿ ದಶಕ-ದಶಕಗಳಿಂದ ಯೋಜನೆಗಳ ಕಣ್ಣೀರ ಕಥೆಗೆ ಕೊನೆ ಇಲ್ಲವಾಗಿದೆ. ಯುಕೆಪಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡಲು ಬದ್ಧ ಎಂಬ ಪಾದಯಾತ್ರೆ, ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ನೀರು ನೀಡಲು ಬದ್ಧ ಎಂಬ ವಾಗ್ಧಾನ, ಇಡೀ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆಂಬ ಹೇಳಿಕೆಗಳನ್ನು ಕೇಳಿ ಕೇಳಿ ಜನರು ಸುಸ್ತಾಗಿದ್ದಾರೆ. ಚುನಾವಣೆ ಮುಗಿದು ಅಧಿಕಾರ ಹಿಡಿದ ನಂತರ ಮರೆಯಾಗುತ್ತದೆ. ಇದು ರಾಜಕೀಯ ಪಕ್ಷಗಳಿಗೆ, ಉತ್ತರ ಕರ್ನಾಟಕದ ಜನತೆ ಹೊಸದೇನೂ ಅಲ್ಲವೇ ಅಲ್ಲ. ನೀರಾವರಿ ಯೋಜನೆಗಳ ಪೂರ್ಣಕ್ಕೆ ನಾವು ಬದ್ಧ ಎಂಬ ಪ್ರತಿಜ್ಞೆ ರಾಜಕೀಯ ಪಕ್ಷಗಳು ಮಾಡಬೇಕಿದೆ. ಯೋಜನೆ ಮುಗಿಯುವವರೆಗೆ ಹೋರಾಟ ನಿಲ್ಲದು ಎಂದು ಪಕ್ಷಾತೀತರು ವಿಶ್ವಾಸ ಮೂಡಿಸಬೇಕಿದೆ.
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ನಂತರ 3-4 ವರ್ಷ ಹನಿಮೂನ್ ಮೂಡ್‌ನಲ್ಲಿರುವ ರಾಜ್ಯದ ಮೂರು ಪಕ್ಷಗಳು ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ ಎನ್ನುವಾಗ ಎಚ್ಚೆತ್ತಂತೆ ನೀರಾವರಿ ಯೋಜನೆಗಳು, ಅಭಿವೃದ್ಧಿಯ ಕಾಳಜಿ ಎಂಬ ನಾಟಕ ಶುರುವಿಟ್ಟುಕೊಳ್ಳುತ್ತವೆ. ನೀರಾವರಿ ಯೋಜನೆಗಾಗಿ ನಾವು ಎಂದು ಜನರಿಗೆ ನೀರು ಕುಡಿಸುವ ಕೆಲಸ ಮಾಡುತ್ತಾರೆ. ನೀರಾವರಿ ಯೋಜನೆಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟತೆ ಇಲ್ಲವಾಗಿದೆ. ಕಳಸಾ-ಬಂಡೂರಿ ವಿಚಾರದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಜನರಿಗೆ ಸುಳ್ಳು ಹೇಳುತ್ತಿದೆ. ಫಿಸಿಬಿಲಿಟಿ ವರದಿಯನ್ನೇ ಡಿಪಿಆರ್ ಎಂಬಂತೆ ಬಿಂಬಿಸುತ್ತಿದೆ. ಕೇಂದ್ರದ ಸುಮಾರು 18-22 ಇಲಾಖೆಗಳ ಒಪ್ಪಿಗೆ ಪಡೆಯದೆ ಕಾಮಗಾರಿ ಆರಂಭ ಸಾಧ್ಯವೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ. –ವಿಕಾಶ ಸೊಪ್ಪಿನ, ಆಪ್, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ
-ಅಮರೇಗೌಡ ಗೋನವಾರ