Advertisement

ಚುನಾವಣೆ ಪ್ರಚಾರ ಧ್ವಜ, ಬ್ಯಾನರ್‌ ಬಳಕೆಗೆ ನಿಯಮಾವಳಿ

07:51 PM Apr 07, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಧ್ವಜ, ಬ್ಯಾನರ್‌ ಇತ್ಯಾದಿ ಬಳಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದ್ದಾರೆ.

Advertisement

ಚುನಾವಣೆ ಸಂಬಂಧ ಸ್ಥಾಪಿಸುವ ಧ್ವಜ, ತೋರಣ, ಬ್ಯಾನರ್‌ ಇತ್ಯಾದಿ ಪ್ರಚಾರ ಸಾಮಗ್ರಿಗಳು ಇತರರಿಗೆ ತೊಂದರೆಯುಂಟುಮಾಡುವಂತಿರಬಾರದು. ಜಿಲ್ಲಾ ಚುನಾವಣೆ ಅಧಿಕರಿ/ಸಹಾಯಕ ಚುನಾವಣೆ ಅಧಿಕಾರಿ ಪಾಸ್‌ ಮಂಜೂರು ಮಾಡಿರುವ ವಾಹನಗಳಿಗೆ ಮಾತ್ರ ಚುನಾವಣೆ ಪ್ರಚಾರ ನಡೆಸಲು ಅನುಮತಿಯಿರುವುದು. ಸ್ಪಾಟ್‌ ಲೈಟ್‌ಗಳು, ಫೋಕಸ್‌/ಸರ್ಚ್‌ ಲೈಟ್‌ಗಳು, ಸೈರನ್‌ಗಳು ಇತ್ಯಾದಿ ಪ್ರಚಾರ ವಾಹನಗಳಲ್ಲಿ ಇರಿಸುವುದು, ಬಳಸುವುದು ಕೂಡದು.

ಚುನಾವಣೆ ಪ್ರಚಾರಕ್ಕೆ ಧ್ವನಿವರ್ಧಕ ಬಳಕೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬೇಕು. ಕರ್ತವ್ಯ ಹೊಂದಿರುವ ಸಿಬಂದಿಯ ಅರಿವಿಗೆ ಬಾರದೆ, ಒಪ್ಪಿಗೆ ಪಡೆಯದೆ ಧ್ವಜ ಸ್ಥಾಪನೆ, ಧ್ವನಿವರ್ಧಕ ಬಳಕೆ ಸಲ್ಲದು. ಇದಕ್ಕಾಗಿ ಈ ಕೆಳಗೆ ತಿಳಿಸಲಾದ ನಿಬಂಧನೆಗಳಿಗೆ ಅನ್ವಯವಾಗಿ ಬಳಸಬೇಕು.

ಚುನಾವಣೆ ಪ್ರಚಾರಕ್ಕೆ ತ್ರಿಚಕ್ರ/ನಾಲ್ಕು ಚಕ್ರ/ಇ-ರಿûಾ/ದ್ವಿಚಕ್ರ ವಾಹನಗಳಲ್ಲಿ ಗರಿಷ್ಠ 181/2 ಅಡಿ ಅಗಲವಿರುವ ಒಂದು ಧ್ವಜಮಾತ್ರ ಬಳಸಬಹುದಾಗಿದೆ. ಇಂಥಾ ವಾಹನಗಳಿಗೆ ನಿಗದಿತ ಅಗಲದ ಒಂದು ಯಾ ಎರಡು ಸ್ಪೀಕರ್‌ ಮೋಟಾರು ವಾಹನ ಇಲಾಖೆ ತಿಳಿಸುವ ರೀತಿ ಸ್ಥಾಪಿಸಬೇಕು. ಬ್ಯಾನರ್‌ ಗಳು ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಬಳಸಕೂಡದು.

ಇತರ ಪಕ್ಷಗಳೊಂದಿಗೆ ಸಖ್ಯಹೊಂದಿರುವ/ಸೀಟು ಕುರಿತು ಮಾತುಕತೆ ನಡೆಸಿ ಸ್ಪರ್ಧೆಯಲ್ಲಿರುವ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ವಾಹನಗಳಲ್ಲಿ ಸಖ್ಯದಲ್ಲಿರುವ ಪಕ್ಷಗಳ ಒಂದೇ ಧ್ವಜ ಇರಿಸಬಹುದಾಗಿದೆ. ಧ್ವಜ ಸ್ಥಾಪಿಸಲು ಬಳಸುವ ದಂಡಕ್ಕೆ 3 ಅಡಿಗಿಂತ ಅಧಿಕ ಉದ್ದವಿರಬಾರದು. ರೋಡ್‌ ಶೋದಲ್ಲಿ ಭಾಗವಹಿಸುವ ವೇಳೆ ಕೈಗಳಲ್ಲಿ ಹಿಡಿಯುವ ಧ್ವಜ 6×4 ಅಡಿಗಿಂತ ದೊಡ್ಡದಾಗಿರಬಾರದು.

Advertisement

ಅಭ್ಯರ್ಥಿಯ ಚುನಾವಣೆ ಪ್ರಚಾರ ಸಂಬಂಧ ಸಾಲಾಗಿ ಸಂಚರಿಸುವ ವಾಹನಗಳ ಸಂಖ್ಯೆ 10ಕ್ಕಿಂತ ಹೆಚ್ಚಾಗಿರಬಾರದು. ಹತ್ತಕ್ಕಿಂತ ಅಧಿಕ ವಾಹನಗಳಿದ್ದಲ್ಲಿ ಹತ್ತು ವಾಹನಗಳ ನಡುವೆ ಇತರ ವಾಹನಗಳಿಗೆ ತೆರಳಲು 100 ಮೀಟರ್‌ ಎಡೆ ದಾರಿಗಳನ್ನು ಒದಗಿಸುವ ಸ್ವಯಂ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next