ಕುಷ್ಟಗಿ: ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವಂತೆ ಪ್ರೇರೇಪಿಸಲು ಸ್ಥಳೀಯ ವೈದ್ಯರೊಬ್ಬರು ಕ್ಲಿನಿಗೆ ಬರುವ ರೋಗಿಗಳಿಗೆ ಮತದಾನದ ಪ್ರಜ್ಞೆ ಮೂಡಿಸುತ್ತಿದ್ದಾರೆ.
ಪಟ್ಟಣದ 7ನೇ ವಾರ್ಡ್ ವ್ಯಾಪ್ತಿಯ ಪಂಚಮ್ ಲೇಔಟ್‌ನಲ್ಲಿರುವ ದಾನಿ ಕ್ಲಿನಿಕ್‌ನ ಡಾ| ರವಿಕುಮಾರ ದಾನಿ ಅವರು, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮ ಕ್ಲಿನಿಗ್ ಬರುವ ರೋಗಿಗಳಿಗೆ ಯಾವುದೇ ಕಾರಣಕ್ಕೂ ಮೇ 10ರಂದು ತಪ್ಪದೇ ಮತದಾನ ಮಾಡುವಂತೆ ಮನವಿ, ಮನವರಿಕೆ ಮಾಡುತ್ತಿದ್ದಾರೆ. ಔಷಧಿ ಚೀಟಿಯಲ್ಲಿ ಔಷಧಿಯ ಜೊತೆಗೆ ರೌಂಡ್ ಸೀಲ್ ಒತ್ತುತ್ತಾರೆ. ಸದರಿ ಶೀಲ್‌ನಲ್ಲಿ “ಆರೋಗ್ಯಯುತ ನಾಡಿಗೆ ಮತದಾನ ಮಾಡಿ’, “ಮತದಾನ ನಿಮ್ಮ ಹಕ್ಕು’, “ತಪ್ಪದೇ ಮತ ಚಲಾಯಿಸಿ’ ಎಂಬ ಸಂದೇಶದ ಜೊತೆಗೆ ಹಾಗೂ “ಮತದಾನ ದಿನಾಂಕ ಮೇ 10, 2013 ಮುದ್ರೆ ಹಾಕುತ್ತಾರೆ.
ಇದನ್ನು ಅಚ್ಚರಿಯಿಂದ ಗಮನಿಸುವವರು, ಮತದಾನ ಮಾಡುವ ಭರವಸೆ ವ್ಯಕ್ತಪಡಿಸಿ ವೈದ್ಯರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಒಂದು ಮತದಿಂದ ಏನು ಸಾಧ್ಯ ಎಂದು ಮತದಾನದಿಂದ ದೂರ ಉಳಿಯುತ್ತಿರುವುದು, ಊರಲ್ಲಿ ಇದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ. ನನ್ನ ವೃತ್ತಿಯಲ್ಲಿ ಕೈಲಾದ ಮಟ್ಟಿಗೆ ಈ ಸೇವೆ ಸಲ್ಲಿಸುತ್ತಿದ್ದು, ಇದು ನನ್ನ ಕರ್ತವ್ಯ ಎಂದು ನಿಭಾಯಿಸುತ್ತಿರುವೆ. ಇದಕ್ಕೆ ರೋಗಿಗಳು ತಪ್ಪದೇ ಮತದಾನ ಭರವಸೆ ನೀಡುತ್ತಿದ್ದಾರೆ ಎಂದು ಡಾ| ರವಿಕುಮಾರ “ಉದಯವಾಣಿ’ಗೆ ವಿವರಿಸಿದರು.
ಮತದಾರರಿಗೆ ಮತದಾನದ ಮಹತ್ವ ಹಾಗೂ ಮತದಾನ ಮಾಡುವ ಪ್ರಜ್ಞೆ ಮೂಡಿಸುತ್ತಿರುವ ಡಾ| ರವಿಕುಮಾರ ದಾನಿ ಅವರ ಈ ಕಾರ್ಯಕ್ಕೆ ಅಭಿನಂಸುತ್ತೇನೆ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸುವೆ.
ಚಿದಾನಂದ ಡಿ., ಚುನಾವಣಾಧಿಕಾರಿ, ಕುಷ್ಟಗಿ
ಒಂದು ಮತದಿಂದ ಅಭ್ಯರ್ಥಿಯ ಜಯ ನಿರ್ಣಯವಾಗುವ ಪರಿಸ್ಥಿತಿಯಲ್ಲಿ ಮತದಾನದಿಂದ ದೂರ ಉಳಿಯುವುದು ಸರಿ ಅಲ್ಲ. ದಾನಿ ಕ್ಲಿನಿಕ್ ಬರುವವರಿಗೆ ಈ ರೀತಿಯ ಜಾಗೃತಿ ಮತದಾರರನ್ನು ಎಚ್ಚರಿಸುತ್ತಿದೆ. ಡಾ| ರವಿಕುಮಾರ ಅವರು ರೋಗಿಗಳ ಸೇವೆ ಅಲ್ಲದೇ ಮಾತದಾರರಿಗೆ ಜಾಗೃತಿ ಮೂಡಿಸುವ ಸಾಮಾಜಿಕ ಕಾಳಜಿ ಮಾದರಿಯಾಗಿದೆ.
ಶರಣಪ್ಪ ಸಂಗಟಿ, ಚಿಕಿತ್ಸೆಗೆ ಬಂದವರು
ಮೂರು ದಿನಗಳಿಂದ ನಮ್ಮ ಕ್ಲಿನಿಕ್ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸೀಮಿತ ಅವಕಾಶದಲ್ಲಿ ಮತದಾನ ಜಾಗೃತಿ ಮಾಡುತ್ತಿರುವೆ. ಮೇ 10ರಂದು ಮತದಾನ ಮಾಡಿದವರು, ಬೆರಳಿಗೆ ಹಚ್ಚಿದ ಶಾಹಿ ಗುರುತು ತೋರಿಸುವವರಿಗೆ ಉಚಿತ ತಪಾಸಣೆ ಮಾಡುವುದಲ್ಲದೇ, ಅವರಿಗೆ ಸಸಿಗಳನ್ನು ಉಚಿತವಾಗಿ ನೀಡುವ ಯೋಜನೆ ಇದೆ. ಮತದಾನದ ವೇಳೆ ಯಾವೊಬ್ಬ ಮತದಾರರು ಮತದಾನದಿಂದ ದೂರ ಉಳಿಯಬಾರದು ಎನ್ನುವುದೇ ನನ್ನ ಕಳಕಳಿ.
ಡಾ| ರವಿಕುಮಾರ ದಾನಿ, ದಾನಿ ಕ್ಲಿನಿಕ್ ಕುಷ್ಟಗಿ
ಮಂಜುನಾಥ ಮಹಾಲಿಂಗಪುರ