Advertisement
ಅರವಕುರುಚಿ ಪ್ರದೇಶ ಒಳಗೊಂಡಂತೆ ಸುತ್ತಮುತ್ತಲಿನ ಸುಮಾರು 40 ಸಾವಿರ ಎಕ್ರೆ ಪ್ರದೇಶದಲ್ಲಿ ನುಗ್ಗೇಕಾಯಿ ಬೆಳೆಯಲಾಗುತ್ತದೆ. ಆದರೆ ಈಗ ಚರ್ಚೆಗೆ ಬಂದಿರುವುದು ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಸ್ಪರ್ಧೆಯಿಂದ. ಬಿಜೆಪಿ ಅಭ್ಯರ್ಥಿಯಾಗಿ ಕುಪ್ಪುಸ್ವಾಮಿ ಅಣ್ಣಾಮಲೈ ಉಮೇದುವಾರಿಕೆ ಘೋಷಿಸಿದ್ದಾರೆ. ಮಿತ್ರ ಪಕ್ಷ ಎಐಎಎಡಿಎಂಕೆ ಬಿಟ್ಟು ಕೊಟ್ಟ ಕ್ಷೇತ್ರವಿದು. ಡಿ.ಎಂ.ಕೆ ಯಿಂದ ಆರ್ ಇಳಂಗೋ ಪ್ರತಿಸ್ಫರ್ಧಿ. ತಮಿಳುನಾಡಿನ ಕರೂರು ಲೋಕಸಭಾ ಕ್ಷೇತ್ರದ ಒಂದು ವಿಧಾನಸಭಾ ಕ್ಷೇತ್ರ. ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರಿಗೆ ಗೆಲ್ಲುವ ಹಂಬಲ. ಈ ಕ್ಷೇತ್ರದ ಇತಿಹಾಸ ಕೆದಕಿದರೆ, 1980 ರ ನಂತರ ಇದು ಪ್ರಾದೇಶಿಕ ಪಕ್ಷಗಳ ಕೋಟೆ. ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನೊಳಗೊಂಡ ಮೈತ್ರಿಕೂಟ ಪ್ರಯೋಗ ನಡೆದರೂ ಇದುವರೆಗೆ ಎರಡೂ ಪ್ರಧಾನ ಪ್ರಾದೇಶಿಕ ಪಕ್ಷಗಳು (ಎಐಎಡಿಎಂಕೆ ಹಾಗೂ ಡಿಎಂಕೆ) ಕ್ಷೇತ್ರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡಿದ್ದವು. ಶೇ. 65 ಕ್ಕೂ ಹೆಚ್ಚು ಜನಸಂಖ್ಯೆ ಗ್ರಾಮೀಣ ಪ್ರದೇಶದವರಾದರೆ, ಉಳಿದದ್ದು ನಗರ ಪ್ರದೇಶದವರು. ಈ ಕ್ಷೇತ್ರದಲ್ಲಿ ಉದ್ಯಮ, ಕೈಗಾರಿಕೆಗಳು ಕಡಿಮೆ. ಜನರೆಲ್ಲಾ ಪ್ರಾದೇಶಿಕ ಪಕ್ಷಗಳತ್ತ ಒಲವು ಹೊಂದಿದವರು. ಆ ದೃಷ್ಟಿಯಲ್ಲಿ ಮೊದಲ ಬಾರಿಗೆ (1980ರ ಬಳಿಕ) ರಾಷ್ಟೀಯ ಪಕ್ಷ ಸ್ಪರ್ಧಿಸಿದೆ. ಪ್ರಾದೇಶಿಕ ಪಕ್ಷದತ್ತ ಚಿತ್ತ ಹರಿಸಿರುವ ಮತದಾರರನ್ನು ರಾಷ್ಟ್ರೀಯ ಪಕ್ಷದತ್ತ ಸೆಳೆಯುವುದು ಮೊದಲನೇ ಸವಾಲು.
Related Articles
Advertisement
ಇನ್ನೊಂದು ನೆಲೆಯಲ್ಲಿ ಕಾಣುವುದಾದರೆ, ಐದೂ ವಿಧಾನಸಭಾ ಕ್ಷೇತ್ರಗಳು ಎಐಎಡಿಎಂಕೆ ಕೈಯಲ್ಲಿವೆ. ಆದರೆ ಆಡಳಿತ ವಿರೋಧಿ ಅಲೆ ಪ್ರಬಲಗೊಂಡರೆ ಬಿಜೆಪಿಗೆ ತುಸು ಕಷ್ಟ. ಒಟ್ಟು 2. 15 ಲಕ್ಷ ದಷ್ಟು ಮತದಾ ರರನ್ನು ಹೊಂದಿರುವ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ತುಸು ಹೆಚ್ಚು. ಸುಮಾರು 35 ಸಾವಿರ ಮುಸ್ಲಿಂ ಸಮುದಾಯದ ಮತಗಳ ಮೇಲೆಯೇ ಎಲ್ಲರ ಕಣ್ಣು.ಇಷ್ಟೆಲ್ಲದರ ಮಧ್ಯೆ ಕೆ. ಅಣ್ಣಾಮಲೈ ಸೆಣಸುತ್ತಿದ್ದಾರೆ. ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತಿತರರು ಅಣ್ಣಾಮಲೈ ಪರ ಪ್ರಚಾರ ನಿರತರಾಗಿದ್ದಾರೆ. ಸವಾಲು ಗಳೇ ಅವಕಾಶವನ್ನು ಸೃಷ್ಟಿಸುತ್ತವೆ ಎಂಬ ಮಾತು ಇಲ್ಲಿ ಅನ್ವಯವಾಗುವುದೋ ಕಾದು ನೋಡಬೇಕು. – ಅಶ್ವಘೋಷ