Advertisement

ಚುನಾವಣ ಬಜೆಟ್‌: ಕರಾವಳಿಯಿಂದ ಹಲವು ನಿರೀಕ್ಷೆ

12:04 AM Jan 29, 2023 | Team Udayavani |

ಮಂಗಳೂರು: ರಾಜ್ಯ ಸರಕಾರದ ಕೊನೆಯ ವರ್ಷದ “ಚುನಾವಣ ಬಜೆಟ್‌’ ಫೆ. 17ರಂದು ಮಂಡನೆಯಾಗಲಿದ್ದು ಜಿಲ್ಲೆಯ ಜನತೆಯಲ್ಲಿ ಹಲವು ನಿರೀಕ್ಷೆ ಹುಟ್ಟಿಸಿದೆ.
ಚುನಾವಣ ಬಜೆಟ್‌ ಆಗಿರುವುದರಿಂದ ಹಲವು ಭರವಸೆಗಳು ವ್ಯಕ್ತವಾಗಬಹುದು. ಕಾರ್ಯಗತವಾಗುವ ಸಾಧ್ಯಾಸಾಧ್ಯತೆಗಳು ಅದೇ ಸರಕಾರ ಮತ್ತೆ ಬಂದರೆ ಮಾತ್ರ ಎನ್ನುವುದು ನಿಜ. ಹಾಗಿದ್ದರೂ ಒಂದಷ್ಟು ಪ್ರಮುಖ ವಿಚಾರಗಳು ಈಗಿನ ಸರಕಾರದಿಂದ ನಿಜವಾಗಬಹುದು ಎಂಬ ನಿರೀಕ್ಷೆಗಳಿವೆ.

Advertisement

ಕುಮ್ಕಿ ಹಕ್ಕು
ಕರಾವಳಿಯ ಕೃಷಿಕರು ಹಲವು ದಶಕಗಳಿಂದ ಕುಮ್ಕಿ ಹಕ್ಕು ಕೇಳುತ್ತ ಬಂದಿದ್ದಾರೆ. ಹಿಂದೆ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದ ವೇಳೆ ಬಿಜೆಪಿ ಸರಕಾರ ಅದನ್ನು ಘೋಷಿಸಿತ್ತು. ಅನಂತರ ಸಿದ್ದರಾಮಯ್ಯ ನೇತೃತ್ವದ ಸರಕಾರ ಅನುಷ್ಠಾನಿಸು ಮನ ಮಾಡಿಲ್ಲ.

ರಾಜ್ಯ ಸರಕಾರ ಬೆಳಗಾವಿಯ ಅಧಿವೇಶನದಲ್ಲಿ ಕಾಫಿ, ಕಾಳುಮೆಣಸು ಮತ್ತಿತರ ಬೆಳೆಗಾರರಿಗೆ ಅವರ ಜಮೀನಿಗೆ ಹೊಂದಿಕೊಂಡಂತೆ ಇರುವ 25 ಎಕ್ರೆ ವರೆಗಿನ ಒತ್ತುವರಿ ಜಾಗವನ್ನು ಲೀಸ್‌ಗೆ ಕೊಡುವ ನಿರ್ಣಯ ತೆಗೆದುಕೊಂಡಿತ್ತು. ಸಾವಿರಾರು ಎಕ್ರೆ ಪ್ರದೇಶ ಸರಕಾರಕ್ಕೂ ಬರುವುದಿಲ್ಲ, ಅದರಿಂದ ಆದಾಯವೂ ಇರುವುದಿಲ್ಲ ಎಂಬ ಕಾರಣಕ್ಕೆ ಲೀಸ್‌ಗೆ ಕೊಡುವ ನಿರ್ಧಾರ ಕೈಗೊಂಡಿತ್ತು. ಇದೇ ಮಾದರಿಯಲ್ಲಿ ಕರಾವಳಿ, ಕೊಡಗು ಭಾಗದಲ್ಲಿ ಕುಮ್ಕಿ, ಕಾನ, ಬಾಣೆ, ಸೊಪ್ಪಿನಗುಡ್ಡ ಇತ್ಯಾದಿಗಳ ಕುರಿತು ಕೂಡ ತೆಗೆದುಕೊಳ್ಳುವಂತೆ ಶಾಸಕರು ಆಗ್ರಹಿಸಿದ್ದರು. ಬಜೆಟ್‌ ವೇಳೆ ಅದನ್ನೂ ಘೋಷಣೆ ಮಾಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಆಶ್ವಾಸನೆಯನ್ನೂ ನೀಡಿದ್ದರು.

ಅಡಿಕೆಗೆ ಬೇಕಿದೆ ಅಭಯ
ಮಲೆನಾಡು, ಕರಾವಳಿ ಎರಡೂ ಕಡೆಗಳಲ್ಲಿನ ಅಡಿಕೆ ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿರುವುದು ಎಲೆಚುಕ್ಕಿ ರೋಗ. ದ.ಕ. ಜಿಲ್ಲೆಯ ಬೆಳ್ತಂಗಡಿಯ ಕೆಲವು ಭಾಗ, ಸುಳ್ಯ, ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗ ಆರ್ಭಟಿಸಿದೆ. ಪರಿಣಾಮ ಮುಂದಿನ ಸೀಸನ್‌ಗೆ ಅಡಿಕೆ ಬೆಳೆ ನಷ್ಟವಾಗಿ ಆದಾಯ ಖೋತಾ ಆಗಲಿದೆ. ಹಾಗಾಗಿ ಯೋಗ್ಯ ರೀತಿಯಲ್ಲಿ ಸರಕಾರ ನೆರವು ಪ್ರಕಟಿಸಬೇಕು ಎನ್ನುತ್ತಾರೆ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪಾಡಿ.

ದ.ಕ. ಜಿಲ್ಲೆಯ ಆರ್ಥಿಕತೆ ಮುಖ್ಯವಾಗಿ ಕೃಷಿಯಲ್ಲಿ ಅಡಿಕೆಯ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಇಲ್ಲಿ ಹಾಳೆತಟ್ಟೆಯ ಉದ್ಯಮದಂತಹ ಘಟಕ ನೀಡಬೇಕು, ಎಫ್‌ಪಿಒ (ಕೃಷಿಕ ಉತ್ಪಾದಕ ಸಂಘ) ಮಾಡುವುದಾದಲ್ಲಿ ಅದಕ್ಕೆ ಸರಕಾರದಿಂದ ಸಬ್ಸಿಡಿ ನೀಡುವುದು ಕೂಡ ಪ್ರೋತ್ಸಾಹಕವಾಗಲಿದೆ ಎನ್ನುವುದು ಬೆಳೆಗಾರರ ಅಭಿಮತ.

Advertisement

ಉದ್ಯಮಕ್ಕೆ ಪುಷ್ಟಿ: ಕಿಯೋನಿಕ್ಸ್‌ ವತಿಯಿಂದ 4.62 ಎಕ್ರೆ ಭೂಮಿಯನ್ನು ಕುಂಟಿಕಾನದ ಬ್ಲೂಬೆರಿ ಹಿಲ್ಸ್‌ನಲ್ಲಿ ಐಟಿ ಪಾರ್ಕ್‌ಗಾಗಿ ಮೀಸಲಿರಿಸಿದ್ದು, ಅದಕ್ಕೆ ತಾಗಿಕೊಂಡು 2.35 ಎಕ್ರೆ ಸರಕಾರಿ ಭೂಮಿಯೂ ಇದೆ. ಇವುಗಳಿಗೆ ಸಮೀಪದಲ್ಲೇ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಕೂಡ ಇರುವುದರಿಂದ ಈ ಐಟಿ ಪಾರ್ಕ್‌ ಸ್ಥಾಪನೆಯನ್ನು ಅಧಿಕೃತವಾಗಿ ಬಜೆಟ್‌ನಲ್ಲಿ ಪ್ರಕಟಿಸಬೇಕು ಎನ್ನುವುದು ಈ ಭಾಗದ ಐಟಿ ಉದ್ಯಮಿಗಳ ಆಗ್ರಹ.

ಬಳ್ಕುಂಜೆಯಲ್ಲಿ ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆ ಪ್ರಸ್ತಾವವಿದ್ದು, 1,070 ಎಕ್ರೆ ಗುರುತಿಸಲಾಗಿದೆ. ಈ ಪ್ರದೇಶವನ್ನು ಅತ್ಯಾಧುನಿಕ ದರ್ಜೆಯ ಕೈಗಾರಿಕೆ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಸಂಪನ್ಮೂಲ ಪ್ರಕಟಿಸಬೇಕು. ಅದೇ ರೀತಿ 2020-25ರ ಹೊಸ ಕೈಗಾರಿಕೆ ನೀತಿಯಲ್ಲಿ ಘೋಷಿಸಿದಂತೆ ಕೆಐಎಡಿಬಿ ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳಿಗೆ ಏಕರೂಪದ ಆಸ್ತಿ ತೆರಿಗೆ ವಿಧಿಸುವುದು ಹಾಗೂ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಎಂಎಸ್‌ಎಂಇಗಳು ಮತ್ತು ಕೈಗಾರಿಕೆಗಳಿಗೆ ನ್ಯಾಯಯುತವಾದ ತೆರಿಗೆ ವಿಧಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎಂ. ಗಣೇಶ್‌ ಕಾಮತ್‌ ಆಗ್ರಹಿಸಿದ್ದಾರೆ.

ಅದೇ ರೀತಿ ಕೈಗಾರಿಕೆಗಳು ಪಡೆಯುವ ಬ್ಯಾಂಕ್‌ ಸಾಲಕ್ಕೆ ಮುದ್ರಾಂಕ ಶುಲ್ಕವನ್ನು ಹಿಂದಿನಂತೆಯೇ ಸಾಲದ ಪ್ರಮಾಣ ಎಷ್ಟೇ ಇದ್ದರೂ ಶೇ. 0.1ಕ್ಕೆ ಸೀಮಿತಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

ಪ್ರಮುಖ ಬೇಡಿಕೆಗಳು
ಸಬ್ಸಿಡಿ ಡೀಸೆಲ್‌
ಮೀನುಗಾರಿಕೆ ಬೋಟ್‌ಗೆ ಗರಿಷ್ಠ ನೀಡುವ ಸಬ್ಸಿಡಿ ಡೀಸೆಲ್‌ ಪ್ರಮಾಣವನ್ನು ಪ್ರಸ್ತುತ ಇರುವ 300 ಕೆಎಲ್‌ನಿಂದ 500 ಕೆಎಲ್‌ಗೆ ಏರಿಸಬೇಕು ಎಂಬುದು ಮೀನು ಗಾರ ಸಮುದಾಯದವರ ಒಕ್ಕೊರಲ ಬೇಡಿಕೆ. ಈ ಬಾರಿಯ ಬಜೆಟ್‌ನಲ್ಲಿ ಇದನ್ನು ಮಾಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು ಜತೆ ಸಂಪರ್ಕ
ಮಂಗಳೂರನ್ನು ಬೆಂಗಳೂರು ಜತೆ ಬೆಸೆಯುವ ಹಲವು ಘಾಟಿ ರಸ್ತೆಗಳನ್ನು ಪೂರ್ಣವಾಗಿ ಅಭಿವೃದ್ಧಿ ಪಡಿಸಲೇಬೇಕು, ಇಲ್ಲವಾದರೆ ಇಲ್ಲಿನ ವ್ಯಾಪಾರೋದ್ಯಮ ಬೆಳೆಯದು ಎನ್ನುವುದು ಉದ್ಯಮ ಕ್ಷೇತ್ರದ ಒತ್ತಾಯ.

ಪ್ರವಾಸೋದ್ಯಮ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ಪಿಪಿಪಿ ಮಾದರಿಯಲ್ಲಿ ಹೌಸ್‌ಬೋಟ್‌, ದ್ವೀಪಗಳ ಅಭಿವೃದ್ಧಿ ಇತ್ಯಾದಿ ಕೈಗೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next