Advertisement

Election Bond: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆಗೆ ಕಾಂಗ್ರೆಸ್‌ ಪಟ್ಟು

01:17 AM Sep 30, 2024 | Team Udayavani |

ಬೆಂಗಳೂರು: ಆಡಳಿತ ಮತ್ತು ವಿಪಕ್ಷಗಳ ಆರೋಪ-ಪ್ರತ್ಯಾರೋಪ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಈಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ಬಿಜೆಪಿ ನಾಯಕರ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್‌ ಪಟ್ಟು ಹಿಡಿದಿದೆ.

Advertisement

ಸಿದ್ದರಾಮಯ್ಯ ವಿರುದ್ಧ ಎಫ್ಐಆರ್‌ ದಾಖಲಾದ ಬೆನ್ನಲ್ಲೇ ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದೆ. ಈಗ ಚುನಾವಣ ಬಾಂಡ್‌ ಪ್ರಕರಣದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧವೂ ಎಫ್ಐಆರ್‌ ದಾಖಲಾಗಿದೆ. ಹಾಗಿದ್ದರೆ, ಅವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಲ್ಲವೇ? ಇದು ನೈತಿಕತೆಯ ಪ್ರಶ್ನೆ ಅಲ್ಲವೆ ಎಂದು ಕಾಂಗ್ರೆಸ್‌ ನಾಯಕರು ಕೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಚುನಾವಣ ಬಾಂಡ್‌ ನೆಪದಲ್ಲಿ ಸುಲಿಗೆ ಪ್ರಕರಣದಲ್ಲಿ ಇದರ ಕಿಂಗ್‌ಪಿನ್‌ ನಿರ್ಮಲಾ ಸೀತಾರಾಮನ್‌, ಇ.ಡಿ. ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಿರುದ್ಧ ಎಫ್ಐಆರ್‌ ದಾಖಲಿಸಲು ಕೋರ್ಟ್‌ ಅವಕಾಶ ನೀಡಿದೆ.

ಅದರಂತೆ ಎಫ್ಐಆರ್‌ ಕೂಡ ದಾಖಲಾಗಿದೆ. ಬಿಜೆಪಿ ನಾಯಕರು ಕಳೆದ ಮೂರ್‍ನಾಲ್ಕು ದಿನಗಳಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ಪ್ರಕಾರವೇ ಈಗ ಅವರದ್ದೇ ನಾಯಕರ ವಿರುದ್ಧ ಎಫ್ಐಆರ್‌ ಆಗಿದೆ. ಈಗ ಅವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, 2018ರಿಂದ ಅನೈತಿಕವಾದ ಚುನಾವಣ ಬಾಂಡ್‌ಗಳನ್ನು ಬಿಜೆಪಿ ಸರಕಾರ ಕಾನೂನಾತ್ಮಕವಾಗಿ ಜಾರಿ ಮಾಡಿತ್ತು. ಕಾನೂನಿನಡಿ ಭ್ರಷ್ಟಾಚಾರವನ್ನು ನಡೆಸುವ ಈ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. 2019ರಿಂದ ಆರಂಭವಾದ ಚುನಾವಣ ಬಾಂಡ್‌ ಮೂಲಕ 12 ಸಾವಿರ ಕೋಟಿ ರೂ. ದೇಣಿಗೆ ಪಡೆಯಲಾಗಿದೆ. ಈ ಪೈಕಿ ಸುಮಾರು 6,500 ಕೋಟಿ ರೂ. ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಇದರ ಹೊರತಾಗಿ ಇನ್ನೆಷ್ಟು ಹಣ ಅನೈತಿಕವಾಗಿ ಸೇರಿರಬಹುದು ಎಂದು ಅಂದಾಜಿಸಿದ್ದು, ಅದು ಸುಮಾರು 15 ಸಾವಿರ ಕೋಟಿಯಷ್ಟಾಗಿದೆ ಎಂದು ದೂರಿದರು.

Advertisement

ನರಿ ನ್ಯಾಯ ಪಂಚಾಯತಿ ಮಾಡಿದಂತೆ!
ಮೂರ್‍ನಾಲ್ಕು ದಿನಗಳಿಂದ ಬಿಜೆಪಿಯವರು ಬಹಳ ನೀತಿಪಾಠ ಹೇಳುತ್ತಿದ್ದಾರೆ. ಅವರು ನೀತಿ ಪಾಠ ಹೇಳುವುದು ನರಿ ನ್ಯಾಯ ಪಂಚಾಯತಿ ಮಾಡಿದಂತೆ ಎಂದು ಮೂದಲಿಸಿದ ಪ್ರಿಯಾಂಕ್‌ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ 23 ಸಚಿವರ ಮೇಲೆ ಎಫ್ಐಆರ್‌ ದಾಖಲಾಗಿದ್ದು, ಕುಮಾರಸ್ವಾಮಿ ಅವರೂ ಸೇರಿದಂತೆ ಇವರೆಲ್ಲರೂ ತಮ್ಮ ಪ್ರಕರಣದಲ್ಲಿ ಎ 1 ಆಗ್ರಹಿಸಿದ್ದಾರೆ.

2011ರ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ವಿಪಕ್ಷದ ನಾಯಕ ಅಶೋಕ್‌ ಎ 1 ಆಗಿದ್ದಾರೆ. ಪ್ರಕರಣವೊಂದರಲ್ಲಿ ಎ 2 ಅಪ್ಪಾಜಿ ಅವರಿದ್ದಾರೆ. ಹಾಗಾಗಿ, ಬಿಜೆಪಿ ನಾಯಕರ ಮೇಲೆ ಎಷ್ಟು ಎಫ್ಐಆರ್‌ ದಾಖಲಾಗಿವೆ ನೋಡಿ, ಅವರ ಪಟ್ಟಿ ಮಾಡಿ ಅವರ ರಾಜೀನಾಮೆ ಕೊಡಿಸಿ, ಆಮೇಲೆ ನಮ್ಮ ನಾಯಕರ ರಾಜೀನಾಮೆ ಕೇಳಿ ಎಂದು ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next