ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕೋಮುವಾದ ಮತ್ತು ಜಾತ್ಯತೀತ ಸಿದ್ಧಾಂತದ ಮೇಲೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಚುನಾವಣೆ ನನ್ನ ಹಾಗೂ ಯಡಿಯೂರಪ್ಪ ಅಥವಾ ನನ್ನ ಮತ್ತು ನರೇಂದ್ರ ಮೋದಿ ನಡುವಿನ ಹೋರಾಟವಲ್ಲ. ಜಾತ್ಯತೀತ ತತ್ವ ಮತ್ತು ಹಿಂದುತ್ವ ಸಿದ್ದಾಂತದ ಮೇಲೆ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯವರು ಉಗ್ರವಾದಿಗಳು ಎಂದು ನಾನು ಹೇಳಿಲ್ಲ ಎಂದು ಪುನರುತ್ಛರಿಸಿದ ಮುಖ್ಯಮಂತ್ರಿಯವರು, ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ಹಾಗೂ ನಾವು ಪ್ರತಿಪಾದಿಸುವ ಹಿಂದುತ್ವಕ್ಕೆ ವ್ಯತ್ಯಾಸ ಇದೆ ಎಂದು ಹೇಳಿದರು.
ನಾನು ಮನುಷ್ಯತ್ವ ಇರುವ ಹಿಂದುತ್ವವನ್ನು ಪ್ರತಿಪಾದಿಸುತ್ತೇನೆ. ಹಿಂದುವಾಗಿ ದೇವಸ್ಥಾನಕ್ಕೆ ಹೋಗುವುದು ಮುಖ್ಯವಲ್ಲ. ಹಿಂದು ಧರ್ಮ ಮನುಷ್ಯತ್ವ ಇರುವಂತ್ತದ್ದು. ನಾವು ನಮ್ಮ ಧರ್ಮವನ್ನು ಪಾಲನೆ ಮಾಡಿ, ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು ಎಂದು ಹಿಂದೂ ಧರ್ಮ ಹೇಳುತ್ತದೆ. ನಾವು ಆ ರೀತಿಯ ಹಿಂದುತ್ವವನ್ನು ಪಾಲನೆ ಮಾಡುತ್ತೇವೆ ಎಂದರು.
ನಾನು ಹಿಂದುತ್ವದ ಬಗ್ಗೆ ನೀಡಿರುವ ಹೇಳಿಕೆಗೆ ಕ್ಷಮೆ ಕೇಳುವ ಅಗತ್ಯವೇ ಇಲ್ಲ. ಅದು ದೊಡ್ಡ ವಿಷಯವೇ ಅಲ್ಲ. ಬಿಜೆಪಿಯವರಿಗೆ ರಾಜ್ಯದಲ್ಲಿ ಮಾತನಾಡಲು ಬೇರೆ ವಿಷಯವಿಲ್ಲ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ, ಅಮಿತ್ ಶಾ ಎಲ್ಲರೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.