ಟಿಕೆಟ್ ಆಕಾಂಕ್ಷಿಗಳಿಂದ ಹಿಡಿದು ಹಾಲಿ ಜನಪ್ರತಿನಿಧಿಗಳವರೆಗೆ ಎಲ್ಲರೂ ಉತ್ಸವ, ನೇಮ ಇತ್ಯಾದಿಗಳಲ್ಲಿ ಬ್ಯುಸಿಯಾಗಿದ್ದಾರೆ. ವಾರಾಂತ್ಯವಾದರೆ ಎಲ್ಲಾದರೂ ಕ್ರಿಕೆಟ್ ಪಂದ್ಯಾಟ, ಇನ್ಯಾವುದೋ ಸಮುದಾಯಗಳ ಕಾರ್ಯಕ್ರಮ ಹೀಗೆ ಎಲ್ಲದರಲ್ಲೂ ಹಾಜರು. ಒಟ್ಟಿನಲ್ಲಿ ಎಲ್ಲೆಲ್ಲೂ ಪಕ್ಷದ ಪ್ರಚಾರ ನಡೆಸುತ್ತಲೇ ತಮ್ಮ ಉಮೇದುವಾರಿಕೆಯ ಇಂಗಿತವನ್ನು ವ್ಯಕ್ತಪಡಿಸುವುದೇ ಮುಖ್ಯ. ಅದಕ್ಕಾಗಿಯೇ ಈಗ ಎಲ್ಲರದ್ದೂ ಹೋರಾಟ.
ಮಂಗಳೂರು: ಇನ್ನೇನು ಹತ್ತೋ ಹದಿನೈದೋ ದಿನಗಳಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗಬಹುದು. ಅದರ ಬೆನ್ನಲ್ಲೆ ನೀತಿ ಸಂಹಿತೆ ಎಂಬ ಲಗಾಮು ಎಲ್ಲ ಪಕ್ಷಗಳ ಮೇಲೆ ಬೀಳುತ್ತದೆ. ಅಷ್ಟರಲ್ಲೇ ಮುಗಿಸುವ ಕೆಲಸ ಮುಗಿಸಿ ಬಿಟ್ಟರೆ ಹೇಗೆ?
ಹೀಗೆಂದೇ ರಾಜ್ಯಾದ್ಯಂತ ಹಲವು ಪಕ್ಷಗಳ ಅಭ್ಯರ್ಥಿಗಳು ವಿವಿಧ ಉಡುಗೊರೆಗಳನ್ನು ಕೊಡುತ್ತಿದ್ದರೆ, ದ.ಕ. ಜಿಲ್ಲೆಯಲ್ಲಿ ಪಕ್ಷಗಳು ಪೂರ್ಣಬಲದಲ್ಲಿ ಪ್ರಚಾರದಲ್ಲಿ ತೊಡಗಿವೆ. ನೀತಿ ಸಂಹಿತೆ ಬಂದರೆ ಬಳಿಕ ಎಲ್ಲದಕ್ಕೂ ಲೆಕ್ಕ ಕೊಡಬೇಕು. ಹೆಚ್ಚು ಖರ್ಚಾದರೆ ಅದನ್ನು ಸರಿ ದೂಗಿಸುವ ತಲೆಬಿಸಿ. ಹಾಗಾಗಿ ಚುನಾವಣೆ ಘೋಷಣೆಗೆ ಮೊದಲೇ ಆದಷ್ಟೂ ಪಕ್ಷಗಳ ವರ್ಚಸ್ಸು ಹೆಚ್ಚಿಸುವ ಕೆಲಸ ಮಾಡಿದರೆ, ಮುಂದೆ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಅವರ ಪ್ರಚಾರವನ್ನಷ್ಟೇ ನಿಭಾಯಿಸಬಹುದು ಎಂಬ ಲೆಕ್ಕಾಚಾರ ಪಕ್ಷಗಳದ್ದು.
ಬ್ಯಾನರ್ ಹೋರ್ಡಿಂಗ್ ಭರಾಟೆ
ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ತನ್ನ 3 ಗ್ಯಾರಂಟಿಗಳನ್ನೇ ಹೆಚ್ಚಾಗಿ ಬಿಂಬಿಸುತ್ತಿದೆ. ಮುಖ್ಯವಾಗಿ ಮಂಗಳೂರು ಉತ್ತರದಲ್ಲಿ ಮೊಯ್ದಿನ್ ಬಾವ ಹಾಗೂ ಇನಾಯತ್ ಅಲಿ ಅವರ ಮಧ್ಯೆ ಪೈಪೋಟಿಯಿಂದಾಗಿ ಮಂಗಳೂರು ನಗರ ಉತ್ತರ ಕ್ಷೇತ್ರದುದ್ದಕ್ಕೂ ಭರ್ಜರಿ ಮೇಲಾಟ ಕಂಡುಬರುತ್ತದೆ. ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ, ಪುತ್ತೂರಿನಲ್ಲಿ ಅಶೋಕ್ ರೈ, ಬಂಟ್ವಾಳದಲ್ಲಿ ರಮಾನಾಥ ರೈ ಅವರ ಪ್ರಚಾರ ಜೋರಿದೆ. ಸುಳ್ಯದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ಕಂಡುಬಂದಿಲ್ಲ. ಮಂಗಳೂರು ನಗರ ದಕ್ಷಿಣದಲ್ಲೂ ಬಹಿರಂಗ ಅಬ್ಬರವಿಲ್ಲ. ಬಿಜೆಪಿಯವರು “ಬಿಜೆಪಿಯೇ ಭರವಸೆ” ಎಂಬ ಘೋಷಣೆಗಳೊಂದಿಗೆ ಅಲ್ಲಲ್ಲಿ ತಮ್ಮ ಬ್ಯಾನರ್, ಹೋರ್ಡಿಂಗ್ ಹಾಕಿಕೊಂಡಿದ್ದಾರೆ.
Related Articles
ಸಭೆ, ಸಮಾವೇಶ
ಸಾಮಾನ್ಯವಾಗಿ ಚುನಾವಣೆ ಘೋಷಣೆ ವೇಳೆ ಸಭೆ ಸಮಾವೇಶಗಳು ಹೆಚ್ಚಾಗುವುದು ವಾಡಿಕೆ. ಆದರೆ ಈಗ ಚುನಾವಣ ಆಯೋಗದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಗೆ ಸಾಕಷ್ಟು ಮೊದಲೇ ಸಭೆ, ಸಮಾವೇಶಗಳನ್ನು ಆಯೋಜಿಸುತ್ತಿರು ವುದಲ್ಲದೆ, ಡಿಸೆಂಬರ್‌ನಿಂದಲೇ ಪ್ರಚಾರ ಆರಂಭಿಸಿದ್ದಾರೆ.
ಕ್ಯಾಂಪ್ಕೊದ ಸುವರ್ಣಮಹೋತ್ಸವ ಸಂಭ್ರಮವನ್ನು ಬಿಜೆಪಿಯವರು ಯಶಸ್ವಿಯಾಗಿ ಅಡಿಕೆ ಬೆಳೆಗಾರರ ಸಮಾವೇಶದಂತೆ ಬಿಂಬಿಸಿ, ಪ್ರಚಾರಕ್ಕೆ ಬಳಸಿಕೊಂಡರು. ಇದೇ ರೀತಿ ವಿವಿಧ ಫಲಾನುಭವಿಗಳ ಸಮಾವೇಶ, ಕಾಮಗಾರಿಗಳಿಗೆ ಶಿಲಾನ್ಯಾಸ ಭರ್ಜರಿಯಾಗಿ ನಡೆಯುತ್ತಿದೆ. ಮಾ.16ರಂದು ಬಿಜೆಪಿ ಮತ್ತೆ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶವನ್ನು ಮಂಗಳೂರಿನಲ್ಲಿ ಆಯೋಜಿಸಿದ್ದು , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವರು. ಕಾಂಗ್ರೆಸ್‌ನಿಂದ ಜಿಲ್ಲೆಯಾದ್ಯಂತ ಪ್ರಜಾಧ್ವನಿ ಯಾತ್ರೆ ರಾಜ್ಯಮಟ್ಟದ ನಾಯಕರಿಂದ ಒಮ್ಮೆ ನಡೆದಿದೆ, ಈಗ ತಾಲೂಕು, ಹೋಬಳಿ ಮಟ್ಟದ ಯಾತ್ರೆಗಳು ಅಲ್ಲಲ್ಲಿ ನಡೆಯುತ್ತಿವೆ.
ಕಾಂಗ್ರೆಸ್‌ಗೆ ಅನಿವಾರ್ಯತೆ
ಬಹುತೇಕ ಕಡೆಗಳಲ್ಲಿ ಬಿಜೆಪಿಗೆ ತನ್ನದೇ ಸರಕಾರ, ತಾವೇ ಶಾಸಕ ರಾಗಿರುವುದರಿಂದ ಟಿಕೆಟ್ ಖಾತರಿ ಹೆಚ್ಚಿದೆ. ಹಾಗಾಗಿ ಪ್ರಚಾರಕ್ಕೆ ಹೆಚ್ಚು ಖರ್ಚು ಮಾಡುವಂತೆ ತೋರುತ್ತಿಲ್ಲ. ಆದರೆ ಅನೇಕ ಕಡೆ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಇರುವುದರಿಂದ ಜನರಿಗೆ ತಮ್ಮ ಇರವು ತಿಳಿಯಪಡಿಸಲು ಹೋರ್ಡಿಂಗ್, ಜಾಹೀರಾತುಗಳಿಗೆ ಖರ್ಚು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.ಬಿಜೆಪಿ ಬೆಳ್ತಂಗಡಿಯಲ್ಲಿ ವಿಕಾಸದ ಹಬ್ಬ ಎಂಬ ಪರಿಕಲ್ಪನೆ ಯೊಂದಿಗೆ ಶಾಸಕರ ಸಾಧನೆಗಳನ್ನು ಆಯಾ ಊರುಗಳಲ್ಲಿ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಇದರ ಮಧ್ಯೆ ಪ್ಲಾಸ್ಟಿಕ್ ನಿಷೇಧವಾಗಿದ್ದರೂ ರಾಜಾರೋಷವಾಗಿ ಪಕ್ಷ ಭೇದ ಮರೆತು ಫ್ಲೆಕ್ಸ್ ಹಾಕಲಾಗುತ್ತಿದೆ.
~ವೇಣು ವಿನೋದ್ ಕೆ.ಎಸ್.