Advertisement

“ಕೈ’ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ..!

03:12 PM Nov 29, 2021 | Team Udayavani |

ಕೋಲಾರ: ಮುಖ್ಯಮಂತ್ರಿ ನನ್ನನ್ನು ಹುಲಿ ತರಹ ನಡೆಸಿಕೊಳ್ಳುವ ಭರವಸೆ ನೀಡಿದ್ದು, ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ನನ್ನನ್ನು ತಿರಸ್ಕಾರದಿಂದ ಕಂಡ ಕಾಂಗ್ರೆಸ್‌ಗೆ ನನ್ನ ಶಕ್ತಿ ತೋರಿಸುತ್ತೇನೆ ಎಂದು ತಿಳಿಸಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಬಿಜೆಪಿಗೆ ಬೆಂಬಲ ಘೋಷಿಸಿದರು.

Advertisement

ನಗರದ ಪೂಜಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷ ಸೇರುವ ಕುರಿತು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವೆ. ಈಗ ವಿಧಾನ ಪರಿಷತ್‌ ಚುನಾವಣೆ ಮತ್ತು ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ಕುಮಾರ್‌ ಅವರನ್ನು ಸೋಲಿಸಿಯೇ ತೀರುತ್ತೇವೆ. ನನ್ನೆಲ್ಲಾ ಬೆಂಬಲಿಗರೂ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು.

 ವೇದಿಕೆಯಲ್ಲಿ ಕಣ್ಣೀರು: ಕಳೆದ ಮೂರು ಮುಕ್ಕಾಲು ವರ್ಷದಿಂದ ದುಃಖ ಅನುಭವಿಸಿದ್ದೇನೆ, ಎಂದು ವೇದಿಕೆಯಲ್ಲಿ ಕಣ್ಣೀರು ಸುರಿಸಿದ ವರ್ತೂರು ಪ್ರಕಾಶ್‌, ನಾನು ಕಿಡ್ನಾಪ್‌ ಆದಾಗ ನನ್ನ ಜೀವ ಉಳಿದಿದ್ದೆ ಹೆಚ್ಚು, ನನ್ನನ್ನು ಬೆಂಬಲಿಸಿಕೊಂಡು ಬಂದ ನನ್ನ ಕಾರ್ಯಕರ್ತರು ನಿಮ್ಮ ದುಡ್ಡಲ್ಲೇ ನೀವು ಗ್ರಾಪಂ, ಜಿಪಂ ಚುನಾವಣೆ ಗೆದ್ದಿದ್ದೀರಾ ಎಂದು ತಮ್ಮ ದುಃಖ ತೋಡಿಕೊಂಡರು.

ನಿಮ್ಮೊಂದಿಗೆ ನಾವಿದ್ದೇವೆ: ಮೂರು ಮುಕ್ಕಾಲು ವರ್ಷ ದುಃಖಗಳನ್ನು ನೋಡಿದ್ದೇವೆ, 19 ಪಂಚಾಯತಿ ಬಂದಿದೆ, ನನಗೆ ಅಧಿಕಾರ ಇಲ್ಲ. ಅದರೂ, ಇಷ್ಟು ಜನ ಬಂದಿದ್ದಾರೆ. ಚುನಾವಣೆಯಲ್ಲಿ ಸಹಾಯ ಮಾಡು ಅಂತ ಹೇಳಿ ಹುಲಿತರ ನಡೆಸಿಕೊಳ್ಳುತ್ತೇವೆ ಎಂಬ ಭರವಸೆ ಸಿಕ್ಕಿದೆ, ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್‌ ಅವರನ್ನು ಗೆಲ್ಲಿಸಿಕೊಂಡು ಬಾ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಿಎಂ ಅಭಯ ನೀಡಿದ್ದಾರೆ ಎಂದು ಹೇಳಿದರು.

 ವರ್ತೂರು ಜೊತೆ ನಾವೆದ್ದೇವೆ: ಸಂಸದ ಎಸ್‌. ಮುನಿಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಮೋದಿ ಸಾಧನೆ ನೋಡಿ ಬಿಜೆಪಿಗೆ ಜನನಾಯಕರು ಬರುತ್ತಿದ್ದಾರೆ, ಪಕ್ಷ ಗೆಲುವು ಸಾಧಿಸುತ್ತದೆ, ವೇಣುಗೋಪಾಲ್‌ಗೆ ಮತ ಹಾಕಿ ವರ್ತೂರು ಪ್ರಕಾಶ್‌ರೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.

Advertisement

ಬಿಜೆಪಿಯಲ್ಲಿ ಕಪಟವಿಲ್ಲ: ಸಚಿವ ಮುನಿರತ್ನ ಮಾತನಾಡಿ, ಯಾರು ಸುಳ್ಳು, ಕಪಟ ನಾಟಕವಾಡುತ್ತಾರೆ ಎಂದು ಜನರಿಗೆ ಗೊತ್ತಾಗಿದೆ, ವರ್ತೂರು ಪ್ರಕಾಶ್‌ ಶಾಸಕರಾಗಿದ್ದಿದ್ದರೆ ಕೋಲಾರ ನಗರದ ರಸ್ತೆಗಳು ಈ ರೀತಿ ಇರುತ್ತಿರಲಿಲ್ಲ, ಸರ್ಕಾರದ ಮೇಲೆ ಒತ್ತಡ ಹಾಕಿ ಹಣ ತರುತ್ತಿದ್ದರು ಎಂದರು.

 ಅದೇ ಗೌರವ ವರ್ತೂರು ಸಿಗಲಿದೆ: ಕಣ್ಣು ಕಿವಿ ಇಲ್ಲ ಅಂದರೂ ರಾಜಕೀಯ ಮಾಡ್ತಾರೆ, ಬಿಜೆಪಿ ನುಡಿದಂತೆ ನಡೆದಿದೆ, ನಾವು 17 ಮಂದಿ ಕಾಂಗ್ರೆಸ್‌ ತೊರೆದು ಬಂದೆವು. ನಮಗೆ ಸಚಿವ ಸ್ಥಾನ ನೀಡಿದ್ದಾರೆ, ನಮ್ಮನ್ನು ಒಳ್ಳೆಯ ರೀತಿ ನಡೆಸಿಕೊಂಡಿದ್ದಾರೆ, ಅದೇ ಗೌರವ ಪ್ರಕಾಶ್‌ಗೂ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಮಶ ಕಪಟ ನಾಟಕ ಇಲ್ಲದ ವ್ಯಕ್ತಿ ಪ್ರಕಾಶ್‌ರನ್ನು ನಮ್ಮ ಪಕ್ಷಕ್ಕೆ ಹುಲಿ ತರ ಹಿಡಿಕೊಂಡು ಹೋಗಕ್ಕೆ ಬಂದಿದ್ದೇವೆ. ಅವರು ನಮ್ಮೊಂದಿಗೆ ಇದ್ದರೆ ಕ್ಷೇತ್ರವೂ ಅಭಿವೃದ್ಧಿಯಾಗುತ್ತದೆ, ಅವರ ಜತೆ ಬಿಜೆಪಿ ಇರಲಿದೆ. ಹೊಂದಾಣಿಕೆ ರಾಜಕಾರಣವನ್ನು ತೆಗೆಯಬೇಕು, ಕಮಲ ಗುರುತಿನ ಮೇಲೆ ಗೆಲುವು ಸಾಧಿಸುವವರು ಬೇಕಾಗಿದ್ದಾರೆ ಎಂದರು. ಅಭ್ಯರ್ಥಿ ವೇಣುಗೋಪಾಲ ಮಾತನಾಡಿ, ವರ್ತೂರು ಬೆಂಬಲ ಸೂಚಿಸಿದ್ದಾರೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌, ಸಿ.ಎಸ್‌.ವೆಂಕಟೇಶ್‌, ಕೆ.ಚಂದ್ರಾರೆಡ್ಡಿ, ವೇಣು ಗೋಪಾಲ, ಅರುಣ್‌ಪ್ರಸಾದ್‌, ಬಂಕ್‌ ಮಂಜುನಾಥ್‌, ಸೂಲೂರು ಆಂಜಿನಪ್ಪ ಮತ್ತಿತರರಿದ್ದರು.

ಪ್ರಕಾಶ್‌ಗೆ 2023ಕ್ಕೆ ರಾಜಕೀಯ ಪುನರ್‌ ಜನ್ಮವಾಗಲಿದೆ

ಹುಲಿಯಂತಿರುವ ವರ್ತೂರು ಪ್ರಕಾಶ್‌ಗೆ 2023ರಲ್ಲಿ ರಾಜಕೀಯ ಪುನರ್‌ಜನ್ಮವಾಗಲಿದೆ, ಇಂತಹ ಅಹಿಂದ ನಾಯಕರು ಬಿಜೆಪಿಗೆ ಅಗತ್ಯವಿದೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ ಎಂದು ಸಚಿವ ಡಾ.ಸುಧಾಕರ್‌ ಹೇಳಿದರು.

ಅಹಿಂದಗೆ ಬಿಜೆಪಿಯಲ್ಲಿ ಕೊಟ್ಟಷ್ಟು ಪ್ರಾಮುಖ್ಯತೆ ಬೇರೆ ಕಡೆ ಇಲ್ಲ, ಜನಪರ ಅಭಿವೃದ್ಧಿ ಕಷ್ಟ ಸುಖದಲ್ಲಿ ಭಾಗವಹಿಸುವರು ಜನನಾಯಕ ರಾಜಕೀಯವಾಗಿ ಅನನ್ಯತೆಯನ್ನು ಹೊಂದಿದ ಕೋಲಾರಕ್ಕೆ ಸಮರ್ಥ ನಾಯಕ ಬೇಕು, ಸೆಮಿಫೈನಲ್ಸ್‌ ಇದು 2023 ಫೈನಲ್‌ ಆಗಿರುತ್ತದೆ ಎಂದು ತಿಳಿಸಿದರು. ಶಾಸಕರಾಗಿಲ್ಲ ಎಂಬ ನೋವು ವರ್ತೂರು ಪ್ರಕಾಶ್‌ಗೆ ಬೇಡ, ಅವರೊಟ್ಟಿಗೆ ನಾವಿದ್ದೇವೆ, ಅವರಿಗೆ ಜಿಲ್ಲೆಯಲ್ಲಿ ಆದ್ಯತೆ ಸಿಗಲಿದೆ, ಪ್ರಕಾಶ್‌ಕೈಗೆ ಅಧಿಕಾರ ಸಿಗಲಿದೆ ಎಂದು ಹೇಳಿದರು.

“ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಿಎಂ ಸಹ ನನ್ನ ಸಹಾಯ ಬಯಸಿದ್ದಾರೆ, ಹುಲಿ ತರ ಇದಿಯ, ಹುಲಿ ತರ ನಡೆಸಿಕೊಳ್ಳುತ್ತೇನೆ ಎಂದು ನನಗೆ ಸಿಎಂ ಭರವಸೆ ನೀಡಿದ್ದಾರೆ, ಸಚಿವ ಗೋವಿಂದ ಕಾರಜೋಳ ಸಹ ನನ್ನನ್ನು ಹುಲಿ ಅಂತ ಸಿಎಂ ಮನೆ ಬಳಿ ಗುರುತಿಸಿದರು, ಬಿಜೆಪಿಯವರು ನನ್ನನ್ನು ಪ್ರೀತಿಯಿಂದ ನಡೆಸಿಕೊಳುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಸೋಲಿಗೆ ಅನಿಲ್‌ಕುಮಾರ್‌ ಸಹ ಕಾರಣ, ಅದೇ ರೀತಿ ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ.” –ವರ್ತೂರು ಪ್ರಕಾಶ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next