Advertisement

Election 2023: ಸಾಮಾಜಿಕ ಜಾಲತಾಣ ಬಲ್ಲವರಲ್ಲ! –ನಿರ್ವಹಣೆಗೆ ಇದೆ ಪ್ರತ್ಯೇಕ ತಂಡ

11:59 PM Apr 05, 2023 | Team Udayavani |

ಮಂಗಳೂರು: ಚುನಾವಣೆ ಇರಲಿ, ಬಿಡಲಿ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹರಿಯಬಿಡಲು ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮದೇ ಸೋಶಿಯಲ್‌ ಮೀಡಿಯಾ ಪುಟಗಳನ್ನು ಬಳಸಿಕೊಳ್ಳುವುದು ಈಗ ವಿರಳವಾಗಿ ಉಳಿದಿಲ್ಲ.

Advertisement

ಚುನಾವಣೆಯ ಕಾವು ಆರಂಭವಾಗುತ್ತಿದ್ದಂತೆ ಜನ ಪ್ರತಿನಿಧಿಗಳು ಸಾಮಾಜಿಕ ಜಾಲತಾಣವನ್ನು ಪ್ರಚಾರಕ್ಕೂ ಬಳಸುತ್ತಿದ್ದಾರೆ. ವಿಶೇಷವೆಂದರೆ ಕರಾ ವಳಿಯ ಬಹುತೇಕ ಜನಪ್ರತಿನಿಧಿಗಳಿಗೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಸರಿಯಾದ ಮಾಹಿತಿ ಇಲ್ಲ. ಆದರೂ ಸಹವರ್ತಿಗಳ ತಂಡವನ್ನು ರಚಿಸಿಕೊಂಡು ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಇತ್ತೀಚಿನವರೆಗೂ ಬಳಸುತ್ತಿದ್ದದ್ದು ಕೀಪ್ಯಾಡ್‌ ಮೊಬೈಲ್‌. ಆದರೆ ಅವರ ಟ್ವಿಟರ್‌, ಫೇಸ್‌ಬುಕ್‌ ಖಾತೆಗಳು ಸದಾ ಆ್ಯಕ್ವಿಟ್‌ ಆಗಿರುತ್ತದೆ. ಈ ಖಾತೆಗಳನ್ನು ನಿರ್ವಹಿಸಲೆಂದೇ ದ.ಕ. ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ತಂಡಗಳಿವೆ. ಅದರಲ್ಲಿನ ಸದಸ್ಯರು ಚರ್ಚೆ ಮಾಡಿ, ಟ್ವೀಟ್‌ ಮತ್ತು ರೀ ಟ್ವೀಟ್‌ಗಳನ್ನು ಮಾಡುತ್ತಾರೆ. ಕೆಲವೊಂದು ಬಾರಿ ತಾವು ಮಾಡಿದ ಟ್ವೀಟ್‌ಗಳು ಆಯಾ ಜನಪ್ರತಿನಿಧಿಗಳಿಗೆ ತಿಳಿಯದೇ ಗೊಂದಲವನ್ನುಂಟು ಮಾಡುವ ಪ್ರಸಂಗವೂ ಆಗಾಗ್ಗೆ ನಡೆಯುತ್ತದೆ.

ಶಾಸಕರಿಗೆ ಆಪ್ತರೇ ಮೆಂಟರ್‌
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಎಲ್ಲ ಶಾಸಕರದ್ದು ಅಧಿಕೃತ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿವೆ. ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಸಂಗತಿ ಸೇರಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇದನ್ನೇ ಮುಖ್ಯ ಮಾಧ್ಯಮವನ್ನಾಗಿ ಉಪಯೋಗಿಸುತ್ತಿದ್ದಾರೆ. ಇದಕ್ಕೆಂದು ಪ್ರತ್ಯೇಕ ತಂಡ ಜಿಲ್ಲೆ ಮತ್ತು ಆಯಾ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಖಾತೆಗಳಿಗೆ ಪೋಸ್ಟ್‌ ಹಾಕುವುದು, ಫೋಟೋ ಎಡಿಟಿಂಗ್‌, ಬರವಣಿಗೆ ಕೆಲಸ ಇದೇ ತಂಡದ್ದು. ಅಗತ್ಯ ಬಿದ್ದಾಗ ಮಾತ್ರ ಶಾಸಕರ ಗಮನಕ್ಕೆ ತರಲಾಗುತ್ತದೆ.

ಬಿಜೆಪಿ- ಕಾಂಗ್ರೆಸ್‌ ಸಕ್ರಿಯ
ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಂತೆ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ಐಟಿ ಸೆಲ್‌ ಮೂಲಕ ಮತ್ತಷ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಮೂಲಕ ಪ್ರಚಾರಕ್ಕೆ ಮುಂದಾಗಿದೆ. ಬಿಜೆಪಿಯಿಂದ ಜಿಲ್ಲೆಯ 1,800 ಬೂತ್‌ ಮಟ್ಟದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿತ್ತು. ಒಂದೊಂದು ಗ್ರೂಪ್‌ನಲ್ಲಿ ಸುಮಾರು 200 ಮಂದಿ ಇದ್ದಾರೆ. ಅದೇ ರೀತಿ, ಪ್ರತೀ ವಿಧಾನಸಭಾ ಕ್ಷೇತ್ರವಾರು ಫೇಸ್‌ಬುಕ್‌, ಟ್ವಿಟರ್‌ ಖಾತೆ, ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿ ಸಂದೇಶ ರವಾನಿಸಲಾಗುತ್ತಿದೆ. ಇದಕ್ಕೆಂದು ಪ್ರತೀ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಐಟಿ ತಂಡ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಬಿಜೆಪಿ ದ.ಕ. ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕ ಅಜಿತ್‌ ಕುಮಾರ್‌.

Advertisement

ಮತ್ತೂಂದೆಡೆ ಕಾಂಗ್ರೆಸ್‌ ಪಕ್ಷದಿಂದಲೂ ಸೋಶಿಯಲ್‌ ಮೀಡಿಯ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಪ್ರತೀ ವಿಧಾನಸಭಾ ಕ್ಷೇತ್ರವಾರು ಮತ್ತು ಬ್ಲಾಕ್‌ ಮಟ್ಟದ ಫೇಸ್‌ಬುಕ್‌ ಪೇಜ್‌ ಮಾಡಲಾಗಿದ್ದು, ನಿರ್ವಹಣೆ ಮಾಡಲಾಗುತ್ತಿದೆ. ಅದೇ ರೀತಿ, ಶೇ.80ರಷ್ಟು ಬೂತ್‌ ಮಟ್ಟದಲ್ಲಿ
ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳನ್ನೂ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಪಕ್ಷ ಮಾಡಿರುವ ಸಾಧನೆ, ಬಿಜೆಪಿ ಪಕ್ಷದ ದುರಾಡಳಿತವನ್ನು ಕಾರ್ಯಕರ್ತರಿಗೆ ತಿಳಿಸುವ ಕೆಲಸ ನಡೆಯುತ್ತಿದೆ ಎನ್ನುತ್ತಾರೆ ಕಾಂಗ್ರೆಸ್‌ ದ.ಕ. ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಪೂರ್ಣೇಶ್‌ ಕುಮಾರ್‌ ಮತ್ತು ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಸಂಯೋಜಕಿ ಶೆರಿಲ್‌ ಅಯೋನ.

ಯಾರ್ಯಾರು ಸಕ್ರಿಯ?
ಜಿಲ್ಲೆಯ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಟೀಂ ಮುಂದಿದ್ದಾರೆ. ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಡ್ರೋನ್‌ ವೀಡಿಯೋಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ಶಾಸಕ ಡಾ| ಭರತ್‌ ಶೆಟ್ಟಿ ಕೂಡ ಅದೇ ಮಾದರಿ ಅನುಸರಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಯು.ಟಿ. ಖಾದರ್‌ ಟೀಂ ಶಾಸಕರ ಪ್ರತೀ ನಡೆಯನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಹಾಕುತ್ತಾ ಮುಂದಿದ್ದರೆ, ಮಾಜಿ ಶಾಸಕ ಮೊದಿನ್‌ ಬಾವ ಕೂಡ
ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ.

~  ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next