Advertisement

Election 2023: ಕಾಪು-ಯಾರಿಗೂ ಭದ್ರಕೋಟೆ ಅಲ್ಲ

12:14 AM Apr 10, 2023 | Team Udayavani |

ಉಡುಪಿ: ನೆರೆಯ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಉಡುಪಿ ಜಿಲ್ಲೆಯ ಗಡಿ ಭಾಗದ ವಿಧಾನಸಭಾ ಕ್ಷೇತ್ರವಾಗಿರುವ ಕಾಪು ಪ್ರತಿಷ್ಠಿತ ಚುನಾವಣ ಕಣವಾಗಿದ್ದು, ಇಲ್ಲಿ ಮಹಿಳಾ ಮತದಾರರೇ ಅಧಿಕ.

Advertisement

ಅವಿಭಜಿತ ದ.ಕ. ಜಿಲ್ಲೆಯಾಗಿದ್ದ ಸಂದರ್ಭದಲ್ಲೂ ಈ ಕ್ಷೇತ್ರವಿತ್ತು. ಉಡುಪಿ ಜಿಲ್ಲೆಯಾದ ಅನಂತರವೂ ಉಳಿದುಕೊಂಡಿದೆ. 1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌, 1962, 1967ರಲ್ಲಿ ಪ್ರಜಾ ಸೋಷಿಯಲಿಸ್ಟ್‌ (ಪಿಎಸ್‌ಪಿ)ದ ಅಭ್ಯರ್ಥಿ ಜಯ ಸಾಧಿಸಿದ್ದರು. 1972, 1978ರಲ್ಲಿ ಮತ್ತೆ ಕಾಂಗ್ರೆಸ್‌ ಇಲ್ಲಿ ಅಧಿಕಾರ ಹಿಡಿದಿತ್ತು. ಅನಂತರವೂ ಕಾಂಗ್ರೆಸ್‌ ಪ್ರಾಬಲ್ಯ ಮುಂದುವರಿದಿತ್ತು. ದಕಶಕಗಳ ಕಾಲ ಈ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆಯಾಗಿತ್ತು. ಬಿಜೆಪಿ ಇತ್ತೀಚಿನ ಚುನಾವಣೆಯಲ್ಲಿ ಇಲ್ಲಿ ಜಯ ಸಾಧಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ಹಿಡಿತ ಸಾಧಿಸಿದೆ ಎನ್ನಲಾಗದು.

1983ರಿಂದ 1999ರ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಪಕ್ಷದ ಆಡಳಿತ ಇರಲಿಲ್ಲ. 2004ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಇಲ್ಲಿ ಜಯ ಕಂಡಿತು. 2008ರಲ್ಲೂ ಬಿಜೆಪಿ ಕ್ಷೇತ್ರ ಉಳಿಸಿಕೊಂಡಿತ್ತು. 2013ರಲ್ಲಿ ಮತ್ತೆ ಕಾಂಗ್ರೆಸ್‌ ಪಾಲಾಯಿತು. 2018ರಲ್ಲಿ ಬಿಜೆಪಿ ಅಧಿಕಾರ ಪಡೆಯಿತು. 1957ರಿಂದ 2018 ಚುನಾವಣೆ ವರೆಗೂ ಕಾಂಗ್ರೆಸ್‌ 9 ಬಾರಿ, ಬಿಜೆಪಿ ಮೂರು ಬಾರಿ ಹಾಗೂ ಪಿಎಸ್‌ಪಿ 2 ಬಾರಿ ಜಯ ಸಾಧಿಸಿತ್ತು.

ಈ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದವರು ಹೆಚ್ಚು ಕಾಲ ಶಾಸಕರಾಗಿದ್ದರು. ಅನಂತರ ಮೊಗವೀರ ಮತ್ತು ಬಂಟ ಸಮುದಾಯದವರು ಶಾಸಕರಾದರು. ಮೊಗವೀರರು ಮತ್ತು ಬಿಲ್ಲವ ಸಮುದಾಯದ ಮತದಾರರು ಅಧಿಕವಿದ್ದಾರೆ.

ಈವರೆಗಿನ ಚುನಾವಣೆ ಇತಿಹಾಸ ಅವಲೋಕಿಸಿದರೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಕಳೆದ ಅನೇಕ ಚುನಾವಣೆಯಲ್ಲಿ ಏರ್ಪಟ್ಟಿದೆ. 1,500ಕ್ಕೂ ಕಡಿಮೆ ಅಂತರದಲ್ಲಿ ಎರಡು ಮೂರು ಚುನಾವಣೆಯನ್ನು ಗೆದ್ದಿರುವ ಇತಿಹಾಸವಿದೆ. ಈ ಬಾರಿಯೂ ಇದು ಪುನರಾವರ್ತನೆಯಾಗಬಹುದು ಎನ್ನಲಾಗುತ್ತಿದೆ.

Advertisement

ಒಲಿದಿದೆ ಸಚಿವ ಸ್ಥಾನ
ಕಾಪು ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಶಾಸಕ ರಾದ ವಸಂತ ಸಾಲ್ಯಾನ್‌ ಅವರು ಎಂ. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರ ರಾಗಿದ್ದರು. ಹಾಗೆಯೇ 2013ರಲ್ಲಿ ಕಾಪುವಿನಿಂದ ಮೊದಲ ಬಾರಿಗೆ ಶಾಸಕರಾದ ವಿನಯ ಕುಮಾರ್‌ ಸೊರಕೆಯವರೂ ಅಂದಿನ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿದ್ದರು.

ಟಿಕೆಟ್‌ ಫೈನಲ್‌ ಆಗಿಲ್ಲ
ಈ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಅಂತಿಮವಾಗಿದೆ. ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿಯಿಂದ ಹೆಸರು ಫೈನಲ್‌ ಆಗಿಲ್ಲ. ಹಾಲಿ ಶಾಸಕರು ಸಹಿತ ಹಲವರ ಹೆಸರು ಮುನ್ನೆಲೆಯಲ್ಲಿದೆ. ಎಸ್‌ಡಿಪಿಐ ಹಾಗೂ ಜೆಡಿಎಸ್‌ ಕೂಡ ಸ್ಪರ್ಧೆಗೆ ಇಳಿಯುವ ಸಾಧ್ಯತೆಯಿದೆ.

 ~ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next